ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಇಬ್ಬರು ಕೀನ್ಯಾ ಪ್ರಜೆಗಳಿಂದ 7.5 ಕೋಟಿ ರೂ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲೇ ಇದು ಅತಿ ದೊಡ್ಡ ಜಪ್ತಿ ಕಾರ್ಯಾಚರಣೆಯಾಗಿದೆ.
ಕೀನ್ಯಾದ ರಾಜಧಾನಿ ನೈರೋಬಿಯಿಂದ ಅಡಿಸ್ ಅಬಾಬಾ ಮೂಲಕ ಇಬ್ಬರು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಭಾರಿ ಮೌಲ್ಯದ ಚಿನ್ನ ಪತ್ತೆಯಾಗಿದೆ. 15.57 ಕೆಜಿ ತೂಕದ 19 ಗಟ್ಟಿಗಳು ದೊರೆತಿದ್ದು, ವಿಶೇಷವಾಗಿ ಇವುಗಳನ್ನು ಪ್ಯಾಕ್ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ ಓರ್ವ ಈ ಹಿಂದೆ ನಾಲ್ಕೈದು ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದ. ಆ ಎಲ್ಲ ಸಂದರ್ಭಗಳಲ್ಲೂ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಮತ್ತೋರ್ವ ಆರೋಪಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ದುಬೈನಿಂದ ಬರುವವರು ಚಿನ್ನ ಸಾಗಾಟ ಮಾಡುತ್ತಿದ್ದರು. ಆದರೆ, ಇದು ಹೊಸ ಮಾರ್ಗವಾಗಿದೆ. ಅಲ್ಲದೇ, ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಕೀನ್ಯಾ ಪ್ರಜೆಗಳು ತೊಡಗಿಸಿಕೊಳ್ಳುವುದು ಸಾಮಾನ್ಯವೂ ಅಲ್ಲ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ:ಮಹಿಳೆಯ ಮನೆಗೆ ಬೆಂಕಿ ಹಚ್ಚಲು ಬಂದು ತಾನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ!