ನವದೆಹಲಿ: ಉತ್ತರಾಖಂಡದ ಕೋತ್ದ್ವಾರ್ನಲ್ಲಿ ನಕಲಿ ರೆಮ್ಡೆಸಿವಿರ್ ಚುಚ್ಚುಮದ್ದು ತಯಾರಿಸುತ್ತಿದ್ದ ಔಷಧೀಯ ಘಟಕವನ್ನು ದೆಹಲಿ ಅಪರಾಧ ವಿಭಾಗ ಪೊಲೀಸರು ಪತ್ತೆ ಮಾಡಿದ್ದು, ಓರ್ವ ಮಹಿಳೆ ಸೇರಿ ಐವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ವಿಡಿಯೋ ಜೊತೆಯಲ್ಲಿ ಟ್ವೀಟ್ ಮಾಡಿ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರು ಮಾಹಿತಿ ನೀಡಿದ್ದಾರೆ.
ಒಂದು ಇಂಜೆಕ್ಷನ್‌ಗೆ 25,000 ರೂ.ನಂತೆ ಅತೀ ಅವಶ್ಯಕವಿರುವ ಜನರಿಗೆ 2 ಸಾವಿರ ಇಂಜೆಕ್ಷನ್ಗಳನ್ನು ಆರೋಪಿಗಳು ಮಾರಾಟ ಮಾಡಿದ್ದಾರೆ. ಮಾರಾಟ ಮಾಡಲು ಸಿದ್ಧವಾದ 196 ಚುಚ್ಚುಮದ್ದುಗಳನ್ನು ಹಾಗೂ ಪ್ಯಾಕಿಂಗ್ ಮಾಡಲೆಂದು ಇಟ್ಟಿದ್ದ 3,000 ಖಾಲಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಎಸಿಪಿ ಸಂದೀಪ್ ಲಾಂಬಾ ನೇತೃತ್ವದ ತಂಡವು ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿತ್ತು. ವಿಚಾರಣೆ ವೇಳೆ ಈ ಆರೋಪಿಗಳು ಬಾಯ್ಬಿಟ್ಟ ಮಾಹಿತಿ ಮೇರೆಗೆ ಉತ್ತರಾಖಂಡದ ಕಾರ್ಖಾನೆ ಮೆಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.