ನವದೆಹಲಿ: ಖ್ಯಾತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ಅನ್ನು ಪರಿಗಣಿಸಬೇಕೆ ಎಂಬುದರ ಕುರಿತು ಜುಲೈ 1ರಂದು ಆದೇಶವನ್ನು ನೀಡುವುದಾಗಿ ದೆಹಲಿ ನ್ಯಾಯಾಲಯ ಹೇಳಿದೆ.
ಇಲ್ಲಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ಹರ್ಜೀತ್ ಸಿಂಗ್ ಜಸ್ಪಾಲ್ ಮಂಗಳವಾರ ಸಂಕ್ಷಿಪ್ತ ವಿಚಾರಣೆಯ ನಂತರ ಪ್ರಕರಣವನ್ನು ಮುಂದೂಡಿದರು. ಹೊಸ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇದು ಸುದೀರ್ಘ ಚಾರ್ಜ್ ಶೀಟ್ ಆಗಿರುವುದರಿಂದ ಒಂದೆರಡು ದಿನಗಳ ನಂತರ ಪರಿಗಣನೆಗೆ ಇಡಲಾಗುವುದು ಎಂದು ಹೇಳಿದರು.
ಇದೇ ವೇಳೆ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕುಸ್ತಿಪಟುಗಳ ಪರವಾಗಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದರು. ಪ್ರಸ್ತುತ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ಮೇಲ್ವಿಚಾರಣೆಯನ್ನು ಕೋರಿ ಸಲ್ಲಿಸಲಾದ ಅರ್ಜಿಯು ನಿರುಪಯುಕ್ತ ಎಂದು ನ್ಯಾಯಾಧೀಶರು ಹೇಳಿದರು.
ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಏಳು ಜನ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಸೇರಿ ಎರಡು ಕೇಸ್ಗಳು ದಾಖಲಾಗಿದೆ. ಬ್ರಿಜ್ ಸಿಂಗ್ ವಿರುದ್ಧ ಜೂನ್ 15ರಂದು ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ:'WFI ಮುಖ್ಯಸ್ಥರ ವಿರುದ್ಧ ರಸ್ತೆಗಳಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಹೋರಾಡುತ್ತೇವೆ': ಕುಸ್ತಿಪಟುಗಳ ಸ್ಪಷ್ಟನೆ
ಚಾರ್ಜ್ಶೀಟ್ನಲ್ಲಿ ಸೆಕ್ಷನ್ 354 (ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಕಲಂಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಡಬ್ಲ್ಯುಎಫ್‌ಐ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೆಸರೂ ಇದೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಏಳು ಮಹಿಳಾ ಕುಸ್ತಿಪಟುಗಳ ಪೈಕಿ ಅಪ್ರಾಪ್ತೆ ಸಹ ಸೇರಿದ್ದರು. ಹೀಗಾಗಿ ಪೋಕ್ಸೋ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.
ಕಳೆದ ಒಂದು ದಶಕದಲ್ಲಿ ವಿವಿಧ ಸಮಯಗಳಲ್ಲಿ ಮತ್ತು ಸ್ಥಳಗಳಲ್ಲಿ ಅನುಚಿತ ಸ್ಪರ್ಶ, ಹಿಂಬಾಲಿಸುವುದು ಮತ್ತು ಬೆದರಿಸುವಂತಹ ಲೈಂಗಿಕ ಕಿರುಕುಳದ ಹಲವಾರು ಆರೋಪಗಳನ್ನು ಎರಡೂ ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಪ್ರಾಪ್ತೆಯ ಪ್ರಕರಣದಲ್ಲಿ ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸುವಂತೆ ದೆಹಲಿ ಪೊಲೀಸರು ವರದಿಯನ್ನು ಸಲ್ಲಿಸಿದ್ದಾರೆ. ಪೋಕ್ಸೋ ನ್ಯಾಯಾಲಯವು ಜುಲೈ 4ರಂದು ರದ್ದತಿ ವರದಿಯನ್ನು ಪರಿಗಣಿಸುವ ಸಾಧ್ಯತೆಯಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು. ಕೇಂದ್ರ ಸರ್ಕಾರವು ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಮೇಲುಸ್ತುವಾರಿ ಸಮಿತಿ ರಚಿಸಿತ್ತು. ಮತ್ತೊಂದೆಡೆ, ಕುಸ್ತಿಪಟುಗಳು ಸಿಂಗ್ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದರು.
ಆದರೆ, ಇದುವರೆಗೂ ಡಬ್ಲ್ಯುಎಫ್‌ಐ ವಿರುದ್ಧವಾಗಲಿ ಅಥವಾ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವಾಗಲಿ ಪೊಲೀಸರು ಯಾವುದೇ ಕೇಸ್ ದಾಖಲಿಸಿಲ್ಲ ಎಂದು ಏಪ್ರಿಲ್ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಸೇರಿ ಖ್ಯಾತ ಕುಸ್ತಿಪಟುಗಳು ಮತ್ತೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಕುಳಿತಿದ್ದರು. ಏಪ್ರಿಲ್ 28ರಂದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ಗಳನ್ನು ದಾಖಲಿಸಿದ್ದರು.
ಇದನ್ನೂ ಓದಿ:Brij Bhushan Singh: ಜನಪ್ರತಿನಿಧಿಗಳ ಕೋರ್ಟ್ಗೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಪ್ರಕರಣ ವರ್ಗಾವಣೆ