ನವದೆಹಲಿ:ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಅಲ್ಲದೇ, ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ ಅಪರಾಧಿ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದೆಹಲಿಯಲ್ಲಿ 2008ರ ಸೆಪ್ಟೆಂಬರ್ 30ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ 15 ವರ್ಷಗಳ ಬಳಿಕ ತೀರ್ಪು ಹೊರ ಬಂದಿದೆ. ರವಿ ಕಪೂರ್, ಅಜಯ್ ಕುಮಾರ್, ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಮಲಿಕ್ ಎಂಬುವವರೇ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಅಕ್ಟೋಬರ್ 18ರಂದು ಸಾಕೇತ್ ನ್ಯಾಯಾಲಯವು ಈ ಎಲ್ಲ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು.
ಈ ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರದ ಕಠಿಣ ಕಾನೂನಾದ ಎಂಸಿಒಸಿಎ (ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಕಾಯ್ದೆ ಅಡಿ ಸೆಕ್ಷನ್ 3 (1) (i)ರ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು. ಈ ಪ್ರಕರಣದ ನಾಲ್ಕನೇ ಆರೋಪಿ ಅಜಯ್ ಸೇಥಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 411 ಮತ್ತು ಎಂಸಿಒಸಿಎಯ ಸೆಕ್ಷನ್ 3(2) ಮತ್ತು 3(5) ಅಡಿ ತಪ್ಪಿತಸ್ಥ ಎಂದು ಪ್ರಕಟಿಸಿತ್ತು.
ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ಹಿನ್ನೆಲೆ:ದೆಹಲಿಯಲ್ಲಿಟಿವಿ ಪತ್ರಕರ್ತೆಯಾಗಿದ್ದ ಸೌಮ್ಯಾ ವಿಶ್ವನಾಥನ್ 2008ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಐವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಸೌಮ್ಯಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಇದಾದ ಬಳಿಕ ಹಂತಕರು ತಮ್ಮ ಕೃತ್ಯ ಬಯಲಾಗದಂತೆ ಮಾಡಲು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.