ನವದೆಹಲಿ : ಸಿಂಗಾಪುರದಲ್ಲಿ ಹೊಸ ತಳಿಯ ಕೋವಿಡ್ ವೈರಸ್ ಪತ್ತೆಯಾಗಿದೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕೇಜ್ರಿವಾಲ್ ಹೇಳಿಕೆಯನ್ನು ಸಿಂಗಾಪುರ ಸರ್ಕಾರ ತಳ್ಳಿಹಾಕಿದ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
"ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಸಿಂಗಾಪುರ ಉತ್ತಮ ಪಾಲುದಾರರಾಗಿದ್ದೇವೆ. ಬೇಜವಾಬ್ದಾರಿ ಹೇಳಿಕೆಗಳು ದೀರ್ಘ ಸಮಯದ ಸಹಭಾಗಿತ್ವವವನ್ನು ಕೆಡಿಸುತ್ತದೆ.
ಆದ್ದರಿಂದ ನಾನು ಸ್ಪಷ್ಟಪಡಿಸಲು ಬಯಸುವುದೇನೆಂದರೆ, ದೆಹಲಿ ಸಿಎಂ ಹೇಳಿರುವುದು ಭಾರತ ಹೇಳಿದಂತೆ ಅಲ್ಲ, ಅವರು ಇಡೀ ದೇಶವನ್ನು ಪ್ರತಿನಿಧಿಸುವುದಿಲ್ಲ" ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಓದಿ : ರೂಪಾಂತರಿ ವೈರಸ್ ಮೂಲ ವಿಚಾರ: ಕೇಜ್ರಿವಾಲ್ ಹೇಳಿಕೆ ತಳ್ಳಿ ಹಾಕಿದ ಸಿಂಗಾಪುರ
ಈ ನಡುವೆ ಭಾರತೀಯ ಹೈಕಮಿಷನ್ ಸಂಪರ್ಕಿಸಿರುವ ಸಿಂಗಾಪುರ ಸರ್ಕಾರ, ಕೇಜ್ರಿವಾಲ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. "ಸಿಂಗಾಪುರ ಸರ್ಕಾರ ಇವತ್ತು ನಮ್ಮ ಹೈಕಮಿಷನ್ ಕಚೇರಿಯನ್ನು ಸಂಪರ್ಕಿಸಿ ದೆಹಲಿ ಸಿಎಂ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ.
ದೆಹಲಿ ಸಿಎಂಗೆ ಕೋವಿಡ್ ಹೊಸ ತಳಿ ಅಥವಾ ವಿದೇಶಾಂಗ ನೀತಿಗಳ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ ಎಂದು ನಾವು ಅವರಿಗೆ ಸ್ಪಷ್ಟನೆ ನೀಡಿದ್ದೇವೆ ಎಂದು ಹೈಕಮಿಷನ್ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.