ನವದೆಹಲಿ:ನೀಟ್ ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿನ ವಿಳಂಬ ಖಂಡಿಸಿ ವೈದ್ಯರು ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ಇದೇ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ಈ ವೇಳೆ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರು ಇರಬೇಕಾಗಿರುವುದು ಆಸ್ಪತ್ರೆಗಳಲ್ಲಿ, ಹೊರತಾಗಿ ಬೀದಿಗಳಲ್ಲಿ ಅಲ್ಲ ಎಂದಿರುವ ಕೇಜ್ರಿವಾಲ್, ನೀಟ್-ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆ ತ್ವರಿತಗೊಳಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವೈದ್ಯರ ಸಮಸ್ಯೆ ಬಗೆಹರಿಸಲು ಪ್ರಧಾನಿ ಖುದ್ದಾಗಿ ಮುಂದಾಗಬೇಕು ಎಂದಿರುವ ಸಿಎಂ ಕೇಜ್ರಿವಾಲ್, ಆದಷ್ಟು ಬೇಗ ಪರಿಹಾರ ಮಾರ್ಗ ಕಂಡುಹಿಡಿಯಬೇಕು ಎಂದಿದ್ದಾರೆ. ಟ್ವಿಟರ್ನಲ್ಲಿ ಪತ್ರದ ಪ್ರತಿ ಹಂಚಿಕೊಂಡಿದ್ದಾರೆ. ವೈದ್ಯರ ಮೇಲಿನ ಪೊಲೀಸರ ದೌರ್ಜನ್ಯವನ್ನ ತಾವು ಖಂಡಿಸುವುದಾಗಿ ತಿಳಿಸಿದ್ದಾರೆ.