ಕರ್ನಾಟಕ

karnataka

ETV Bharat / bharat

ದೆಹಲಿ ಅಬಕಾರಿ ಹಗರಣ: ಮೂರನೇ ಸಲ ಇಡಿ ವಿಚಾರಣೆಗೆ ಸಿಎಂ ಅರವಿಂದ್​​ ಕೇಜ್ರಿವಾಲ್​ ಗೈರು - ED summons

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಇಡಿ ವಿಚಾರಣೆಯಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಮೂರನೇ ಬಾರಿಗೆ ಗೈರಾಗಿದ್ದಾರೆ.

ಸಿಎಂ ಅರವಿಂದ್​​ ಕೇಜ್ರಿವಾಲ್
ಸಿಎಂ ಅರವಿಂದ್​​ ಕೇಜ್ರಿವಾಲ್

By ETV Bharat Karnataka Team

Published : Jan 3, 2024, 11:57 AM IST

ನವದೆಹಲಿ:ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ವಿಚಾರಣೆಯಿಂದ ಮತ್ತೆ ತಪ್ಪಿಸಿಕೊಂಡಿದ್ದಾರೆ. ಮೂರನೇ ಬಾರಿ ವಿಚಾರಣೆಗೆ ಗೈರಾಗುತ್ತಿದ್ದಾರೆ. ಇಡಿ ನೀಡಿರುವ ನೊಟೀಸ್​ 'ಕಾನೂನುಬಾಹಿರ' ಎಂದು ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಡಿಸೆಂಬರ್ 22 ರಂದು ಇಡಿ ಸಿಎಂ ಕೇಜ್ರಿವಾಲ್‌ಗೆ ಮೂರನೇ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ಜನವರಿ 3 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಇಂದು ಅವರು ವಿಚಾರಣೆಯಿಂದ ಹೊರಗುಳಿದರು.

ವಿಚಾರಣೆಗೆ ಓಕೆ, ನೊಟೀಸ್ ಕಾನೂನುಬಾಹಿರ​:ವಿಚಾರಣೆಯಿಂದ ಗೈರಾದ ಬೆನ್ನಲ್ಲೇ, ಆಮ್​ ಆದ್ಮಿ ಪಕ್ಷವು ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣದಲ್ಲಿ ಇಡಿಯೊಂದಿಗೆ ಸಹಕರಿಸಲು ಸಿಎಂ ಕೇಜ್ರಿವಾಲ್ ಅವರು ಸಿದ್ಧರಿದ್ದಾರೆ. ಆದರೆ ಅವರನ್ನು ಬಂಧಿಸುವ ಮತ್ತು ಚುನಾವಣಾ ಪ್ರಚಾರದಿಂದ ತಡೆಯುವ ಉದ್ದೇಶದಿಂದ ಈ ನೊಟೀಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ರವಾನೆಯಾಗಿರುವ ನೊಟೀಸ್ ಕಾನೂನುಬಾಹಿರವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ನೊಟೀಸ್ ಕಳುಹಿಸಿರುವುದು ಏಕೆ? ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಿಂದ ತಪ್ಪಿಸುವ ಪ್ರಯತ್ನವಾಗಿದೆ ಎಂದು ಇಡಿಗೆ ಕಳುಹಿಸಿರುವ ಲಿಖಿತ ಉತ್ತರದಲ್ಲಿ ಹೇಳಲಾಗಿದೆ.

ಈ ಹಿಂದೆಯೂ ವಿಚಾರಣೆಗೆ ಗೈರು:ಇದಕ್ಕೂ ಮೊದಲು, ಕಳೆದ ವರ್ಷದ ನವೆಂಬರ್ 2 ಮತ್ತು ಡಿಸೆಂಬರ್ 21 ರಂದು ಇಡಿ ವಿಚಾರಣೆಯನ್ನು ಕೇಜ್ರಿವಾಲ್‌ ತಪ್ಪಿಸಿಕೊಂಡಿದ್ದರು. ನವೆಂಬರ್ 2 ರಂದು ಕಳುಹಿಸಿದ ಮೊದಲ ಸಮನ್ಸ್‌ಗೆ ಆಕ್ಷೇಪಿಸಿದ್ದ ಕೇಜ್ರಿವಾಲ್​ ಇದು ಅಕ್ರಮ ಮತ್ತು ರಾಜಕೀಯ ಪ್ರೇರಿತ ನೊಟೀಸ್​ ಎಂದು ಟೀಕಿಸಿದ್ದರು.

2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಧ್ವನಿ ಅಡಗಿಸಲು ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ. ತನಿಖಾ ಸಂಸ್ಥೆ ಕಳುಹಿಸುತ್ತಿರುವ ಸಮನ್ಸ್​ಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿತ್ತು.

ದೆಹಲಿಯ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಪ್ರತಿಪಕ್ಷಗಳ ತೀವ್ರ ಆಕ್ಷೇಪದ ಕಾರಣ ಹೊಸ ನೀತಿಯನ್ನು ಹಿಂಪಡೆಯಲಾಯಿತು. ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು 2023 ರ ಅಕ್ಟೋಬರ್​ನಲ್ಲಿ ಇದೇ ಹಗರಣದಲ್ಲಿ ಬಂಧಿಸಲಾಯಿತು. ಜೊತೆಗೆ ಸಿಎಂ ಕೇಜ್ರಿವಾಲ್​ ಅವರ ಪಾತ್ರ ಇರುವ ಶಂಕೆಯ ಮೇಲೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್​ ಜಾರಿ ಮಾಡಿದೆ.

ಇದನ್ನೂ ಓದಿ:ನಿತ್ಯ 50 ಸಾವಿರ ಭಕ್ತರಿಗೆ 'ರಾಮದರ್ಶನ', ತೀಸ್ರಿ ಬಾರ್ ಮೋದಿ ಸರ್ಕಾರ್: ಬಿಜೆಪಿ ಘೋಷಣೆ

ABOUT THE AUTHOR

...view details