ನವದೆಹಲಿ:ಉಪಮುಖ್ಯಮಂತ್ರಿ, ತನ್ನ ಬಲಗೈ ಬಂಟ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ಬಳಿಕ ಸಿಡಿದೆದ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಿದ್ದಾರೆ.
ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದೆ ಎಂದೂ ಆರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಇದರಿಂದ ಸರ್ಕಾರದ ಸ್ಥಿರತೆ ಪರೀಕ್ಷಿಸಲು ತಾವೇ ವಿಶ್ವಾಸಮತಯಾಚನೆಗೆ ಮುಂದಾಗಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಆಪ್ ಶಾಸಕರಿದ್ದರೆ, 8 ಮಂದಿ ಮಾತ್ರ ಬಿಜೆಪಿಗರಿದ್ದಾರೆ.
ಬಿಜೆಪಿ ವಿರುದ್ಧ ಆರೋಪ: ಹಲವು ರಾಜ್ಯಗಳಲ್ಲಿ ನಡೆಸಿದಂತೆ ಬಿಜೆಪಿ ದೆಹಲಿಯಲ್ಲೂ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದಕ್ಕಾಗ ಪ್ರತಿ ಆಪ್ ಶಾಸಕರಿಗೆ 20 ಕೋಟಿ ರೂಪಾಯಿ ನೀಡುವ ಆಫರ್ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಪ್ ಶಾಸಕರು ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.