ನವದೆಹಲಿ:ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಾವು ಒಂದು ದಿನದ ಉಪವಾಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಅವರು ಆಮ್ ಆದ್ಮಿ ಪಕ್ಷ ರೈತರ ಪ್ರತಿಭಟನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಾಳೆ ನನ್ನ ರೈತ ಸಹೋದರರೊಂದಿಗೆ ಉಪವಾಸವನ್ನೂ ಮಾಡುತ್ತೇನೆ ಎಂದು ಹೇಳಿದ್ದಾರೆ.
ಓದಿ:ರೈತರನ್ನು ರಕ್ಷಿಸುವ ಸಲುವಾಗಿಯೇ ಕೃಷಿ ಕಾನೂನುಗಳ ಜಾರಿ: ಕೇಂದ್ರ ಕೃಷಿ ಸಚಿವ
ರೈತರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿರುವ ಅರವಿಂದ್ ಕೇಜ್ರಿವಾಲ್ ನಾಳೆ ಉಪವಾಸ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರು ನನ್ನ ಜೊತೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರದ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಾವಿರಾರು ಮಂದಿ ಬೆಂಬಲ ಸೂಚಿಸಿದ್ದಾರೆ. ನಾವು ಒಂದು ದಿನ ಉಪವಾಸವಿದ್ದು, ಒಗ್ಗಟ್ಟನ್ನು ಪ್ರದರ್ಶಿಸೋಣ. ಈ ಕೃಷಿ ಕಾಯ್ದೆಗಳು ದೇಶಕ್ಕೆ ಮಾರಕ ಎಂದು ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.