ನವ ದೆಹಲಿ: ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಆಪ್) ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸದೇ ಹೋದರೂ, ಅಂದಾಜು ಶೇ.13ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಮೊದಲ ಪ್ರಯತ್ನದಲ್ಲೇ ಐದು ಸ್ಥಾನಗಳನ್ನೂ ಆಮ್ ಆದ್ಮಿ ಗೆದ್ದಿದೆ. ಈ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ತಮ್ಮ ಈಗ ರಾಷ್ಟ್ರೀಯ ಪಕ್ಷವಾಗಿ ಆಪ್ ಮಾರ್ಪಟ್ಟಿದೆ ಎಂದು ಘೋಷಿಸಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಕೇಜ್ರಿವಾಲ್, ಗುಜರಾತ್‌ನಲ್ಲಿ ಆಪ್ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೂ, ಅದು ಗಳಿಸಿದ ಮತಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯಲು ಸಹಾಯ ಮಾಡಿದೆ ಎಂದಿದ್ದಾರೆ. ಜೊತೆಗೆ ಗುಜರಾತ್ ಬಿಜೆಪಿಯ ಭದ್ರ ಕೋಟೆಯನ್ನು ಭೇದಿಸಲು ನೆರವಾದ ಜನತೆಗೆ ಧನ್ಯವಾದ ತಿಳಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ರಾಜ್ಯವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಲ ಪಕ್ಷಗಳು ಮಾತ್ರವೇ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಅನುಭವಿಸುತ್ತಿವೆ. ಈಗ ನಾವು ಅವುಗಳಲ್ಲಿ ಒಂದಾಗಿದ್ದೇವೆ. ನಮ್ಮದು ಕೇವಲ 10 ವರ್ಷದ ಪಕ್ಷವಾಗಿದ್ದು, ಈ ಚಿಕ್ಕ ಅವಧಿಯಲ್ಲೇ ಈ ಸ್ಥಾನಮಾನ ಪಡೆದಿದ್ದೇವೆ. ಗುಜರಾತ್ ಫಲಿತಾಂಶ ನಮಗೆ ಆಶಾದಾಯಕವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮ ಪಕ್ಷ ಮತ್ತು ನಾಯಕರು ಎಂದಿಗೂ ಕೆಸರೆರಚಾಟ ಅಥವಾ ನಿಂದನೀಯ ರಾಜಕೀಯದಲ್ಲಿ ತೊಡಗಿರಲಿಲ್ಲ. ಸಕಾರಾತ್ಮಕ ವಿಷಯಗಳು ಮತ್ತು ಆಪ್ ಅಧಿಕಾರದಲ್ಲಿರುವ ದೆಹಲಿ ಮತ್ತು ಪಂಜಾಬ್‌ನಲ್ಲಿ ಪಕ್ಷ ಮಾಡಿದ ಕೆಲಸಗಳ ಬಗ್ಗೆ ಮಾತ್ರ ಪ್ರಸ್ತಾಪ ಮಾಡಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.