ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ದಾರುಣ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಈ ವೇಳೆ ಕಾರು ಗುದ್ದಿದ ರಭಸಕ್ಕೆ ಕಾರಿನ ಟಾಪ್ ಮೇಲೆಯೇ ಶವ ಬಿದ್ದಿದ್ದು, ಮೂರು ಕಿಲೋ ಮೀಟರ್ ದೂರ ಕಾರನ್ನು ಹಾಗೆ ಚಲಿಸಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರ್ ಬಾನೆಟ್ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ!- ವಿಡಿಯೋ
ಇಲ್ಲಿನ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ಏಪ್ರಿಲ್ 29ರಂದು ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಬೈಕ್ಕ್ನಲ್ಲಿ ತೆರಳುತ್ತಿದ್ದ ದೀಪಾಂಶು ವರ್ಮಾ (30) ಎಂಬುವವರು ಮೃತಪಟ್ಟರೆ, ಮತ್ತೋರ್ವ ಮುಕುಲ್ ವರ್ಮಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿ ಕಾರು ಚಾಲಕನನ್ನು ಹರ್ನೀತ್ ಸಿಂಗ್ ಚಾವ್ಲಾ ಎಂದು ಗುರುತಿಸಲಾಗಿದೆ. ಭಾನುವಾರ ಈತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದ್ದು, ಅಪಘಾತಕ್ಕೆ ಕಾರಣವಾದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟಕ್ಕೂ ನಡೆದಿದ್ದೇನು?: ಮೃತ ದೀಪಾಂಶು ವರ್ಮಾ ಮತ್ತು ಈತನ ಸಂಬಂಧಿಯಾದ ಮುಕುಲ್ ವರ್ಮಾ ಒಂದೇ ಬೈಕ್ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಮಹೀಂದ್ರಾ ಎಕ್ಸ್‌ಯುವಿ 500 ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಆಗ ಡಿಕ್ಕಿಯ ರಭಸಕ್ಕೆ ದೀಪಾಂಶು ಗಾಳಿಯಲ್ಲಿ ಹಾರಿ ಕಾರಿನ ಟಾಪ್ ಮೇಲೆಯೇ ಬಿದ್ದಿದ್ದಾನೆ. ಇತ್ತ, ಮುಕುಲ್ ರಸ್ತೆಯಲ್ಲಿ ಬಿದ್ದಿದ್ದಾನೆ. ಆದರೆ, ಕಾರಿನ ಮೇಲೆ ವ್ಯಕ್ತಿ ಬಿದ್ದಿದ್ದರೂ ಚಾಲಕ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ. ಮೂರು ಕಿಲೋ ಮೀಟರ್ ದೂರ ಸಾಗಿದ ಬಳಿಕ ದೀಪಾಂಶು ಮರ್ಮಾನನ್ನು ಚಾಲಕ ರಸ್ತೆಗೆ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.