ಕರ್ನಾಟಕ

karnataka

ETV Bharat / bharat

'ಕುಡಿದು ವಾಹನ ಓಡಿಸಿದ್ದೆವು, ಯುವತಿ ಸಿಲುಕಿದ್ದು ಗೊತ್ತಿರಲಿಲ್ಲ': ದೆಹಲಿ ದುಷ್ಕೃತ್ಯದ ಆರೋಪಿಗಳ ಹೇಳಿಕೆ - ದೆಹಲಿಯ ಸುಲ್ತಾನ್​ಪುರ ಕಾರು ಅಪಘಾತ

ಕಾರಿನಡಿ ಸಿಲುಕಿ ಯುವತಿ ಸಾವನ್ನಪ್ಪಿದ ಪ್ರಕರಣದ ಆರೋಪಿಗಳು ತಪ್ಪೆಸಗಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆಕೆ ಕಾರಿನಡಿ ಸಿಲುಕಿದ್ದು ಮೊದಲು ತಮಗೆ ಗೊತ್ತಿರಲಿಲ್ಲ. ಭಯದಲ್ಲಿ ಕಾರು ಓಡಿಸಿಕೊಂಡು 13 ಕಿಮೀ ದೂರ ಹೋದ ಬಳಿಕ ಪರಿಶೀಲಿದಾಗ ದೇಹ ಸಿಲುಕಿದ್ದು ನೋಡಿದೆವು ಎಂದಿದ್ದಾರೆ. ಪೊಲೀಸ್​ ಎಫ್​ಐಆರ್​​ನಲ್ಲಿ ಈ ಹೇಳಿಕೆ ಇದೆ.

delhi-car-accused
ತನಿಖೆಗೆ ಅಮಿತ್​ ಶಾ ಸೂಚನೆ

By

Published : Jan 3, 2023, 12:50 PM IST

ನವದೆಹಲಿ:ಹೊಸ ವರ್ಷದಂದು ಯುವತಿಯನ್ನು ತಮ್ಮ ಕಾರಿನಡಿ ಎಳೆದೊಯ್ದ ಆರೋಪಿಗಳು ಕುಡಿದು ವಾಹನ ಚಲಾಯಿಸಿದ್ದು ಗೊತ್ತಾಗಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಭಯದಲ್ಲಿ ಕಾರನ್ನು ಜೋರಾಗಿ ಓಡಿಸಿದ್ದಾರೆ. ಈ ವೇಳೆ ಯುವತಿ ಸಿಲುಕಿದ್ದು ಗೊತ್ತಾಗಿಲ್ಲ ಎಂಬ ಆರೋಪಿಗಳ ಹೇಳಿಕೆ ಪೊಲೀಸರು ದಾಖಲಿಸಿದ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ. ಘಟನೆಯ ವೇಳೆ ಕಾರಿನಲ್ಲಿ ಬಿಜೆಪಿ ಮುಖಂಡರೊಬ್ಬರು ಇರುವುದು ಈಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ.

ದೆಹಲಿಯ ಸುಲ್ತಾನ್​ಪುರದಲ್ಲಿ ಪಾರ್ಟಿ ಮುಗಿಸಿ ಹೋಗುತ್ತಿದ್ದಾಗ ಸ್ಕೂಟಿಗೆ ಕಾರು ಡಿಕ್ಕಿಯಾಯಿತು. ಕುಡಿದ ಮತ್ತಿನಲ್ಲಿ ಏನಾಯಿತು ಎಂದು ಗೊತ್ತಾಗದೇ, ಭಯದಲ್ಲಿ ಅಲ್ಲಿಂದ ಪರಾರಿಯಾದೆವು. ಯುವತಿ ಕಾರಿನಡಿ ಸಿಲುಕಿದ್ದು ತಿಳಿಯಲಿಲ್ಲ. 13 ಕಿಮೀ ದೂರ ಹೋದ ಬಳಿಕ ಗೊತ್ತಾಯಿತು ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಪೊಲೀಸರು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿದ್ದಾರೆ.

ಘಟನೆ ನಡೆದ ಸ್ಥಳದಿಂದ 13 ಕಿಲೋ ಮೀಟರ್​ ದೂರದಲ್ಲಿ ಯುವತಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಕಾರಿನ ನಂಬರ್​ ಪ್ಲೇಟ್​ ಮೂಲಕ ತನಿಖೆ ನಡೆಸಲಾಯಿತು. ಕಾರು ಮಾಲೀಕ ಸ್ನೇಹಿತರಿಗೆ ನೀಡಿದ್ದು ತಿಳಿದು ಬಂದಿತ್ತು. ಆತ ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಜಹೊಂಟಿ ಗ್ರಾಮದಲ್ಲಿ ಕಾರು ನಿಲ್ಲಿಸಿ ಪರಿಶೀಲಿಸಿದಾಗ ದೇಹ ಕಾರಿನಡಿ ಸಿಲುಕಿತ್ತು. ರಕ್ತಸಿಕ್ತವಾಗಿದ್ದ ಶವವನ್ನು ಅಲ್ಲಿಯೇ ಬಿಟ್ಟು ಕಾರನ್ನು ಸ್ನೇಹಿತನಿಗೆ ಒಪ್ಪಿಸಿದ್ದಾರೆ. ಈ ವೇಳೆ ಭೀಕರ ಘಟನೆಯ ಬಗ್ಗೆ ಕಾರು ಮಾಲೀಕನಿಗೆ ಮಾಹಿತಿ ನೀಡಿರಲಿಲ್ಲ ಎಂದು ಗೊತ್ತಾಗಿದೆ.

ಶವ ನೋಡಿದ್ದ ಮಿಠಾಯಿ ವ್ಯಾಪಾರಿ:ಸ್ಕೂಟಿಗೆ ಡಿಕ್ಕಿ ಹೊಡೆದಾಗ ಯುವತಿ ಕಾರಿನಡಿ ಸಿಲುಕಿದ್ದನ್ನು ಗುರುತಿಸದೇ ಚಲಾಯಿಸಿಕೊಂಡು ಹೋಗುವಾಗ ಮಿಠಾಯಿ ಅಂಗಡಿ ಮಾಲೀಕನೊಬ್ಬ ಇದನ್ನು ಕಂಡಿದ್ದ. ಕಾರಿನಲ್ಲಿದ್ದವರಿಗೆ ಕೂಗಿ ಹೇಳಿದರೂ ಲೆಕ್ಕಿಸದೇ ಅವರು ಆತುರಾತುರವಾಗಿ ಕಾರು ಓಡಿಸಿಕೊಂಡು ಹೋದರು ಎಂದು ಆತ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.

ರಾತ್ರಿ ವೇಳೆ ಕಾರಿನಡಿ ದೇಹ ಸಿಲುಕಿದ್ದನ್ನು ನೋಡಿದೆ. ಕೂಗಿದರೂ ಕಾರು ನಿಲ್ಲಿಸದಿದ್ದಾಗ ಬೈಕ್​ ಹಾಕಿಕೊಂಡು ಹಿಂಬಾಲಿಸಿದೆ. ಪೊಲೀಸ್​ ಕಂಟ್ರೋಲ್​ ರೂಮಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆದರೆ, ಆ ವೇಳೆ ಪೊಲೀಸರು ಬರಲಿಲ್ಲ ಎಂದು ಸಿಹಿತಿಂಡಿ ಅಂಗಡಿ ಮಾಲೀಕ ಹೇಳಿದ್ದಾನೆ.

ಸೂಕ್ತ ತನಿಖೆಗೆ ಅಮಿತ್​ ಶಾ ಆದೇಶ:ಮೃತ ಯುವತಿಯ ಕುಟುಂಬಸ್ಥರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದು, ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಹೊಸ ವರ್ಷದಂದು ದೇಶಾದ್ಯಂತ ಅಲೆ ಎಬ್ಬಿಸಿದ ಪ್ರಕರಣದ ಸೂಕ್ತ ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ. ತನಿಖೆಯನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಶಾಲಿನಿ ಸಿಂಗ್ ಅವರಿಗೆ ವಹಿಸಲಾಗಿದ್ದು, ಬೇಗನೇ ತನಿಖೆ ನಡೆಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಕಾರಿನಲ್ಲಿದ್ದ ಬಿಜೆಪಿ ಮುಖಂಡ:ಕಾಂಜಾವಾಲಾ ಕಾರು ಅಪಘಾತ ಪ್ರಕರಣದ ಆರೋಪಿಗಳಲ್ಲಿ ಬಿಜೆಪಿ ಮುಖಂಡರೊಬ್ಬರು ಇದ್ದಾರೆ. ಘಟನೆಯ ವೇಳೆ ಆತ ಕಾರಿನಲ್ಲಿದ್ದ ಎಂಬುದು ಗೊತ್ತಾಗಿದೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿ ಆಪ್​ ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದರು. ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಇದನ್ನು ತಡೆಯಲು ಪೊಲೀಸರು ಜಲಫಿರಂಗಿ ಬಳಸಿದ್ದರು.

ಇನ್ನೊಂದು ಸಿಸಿಟಿವಿ ದೃಶ್ಯ ಬಯಲು:ಯುವತಿ ಕಾರಿನಡಿ ಸಿಲುಕಿ ಸಾವನ್ನಪ್ಪುವ ಮೊದಲು ಆಕೆ ತಾನು ಕೆಲಸ ಮಾಡುವ ಕಚೇರಿಯಿಂದ ಹೋಗುತ್ತಿದ್ದಾಗ ಇನ್ನೊಬ್ಬ ಯುವತಿಯ ಜೊತೆಗೆ ಇದ್ದ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ. ಇಬ್ಬರೂ ಸ್ಕೂಟಿಯಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಬಳಿಕ ಆಕೆ ಯಾವುದೋ ಸ್ಥಳದಲ್ಲಿ ಇಳಿದು ಹೋದ ಬಳಿಕ ಈ ಭೀಕರ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು: ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ಭಾರಿ ಪ್ರತಿಭಟನೆ

ABOUT THE AUTHOR

...view details