ನವದೆಹಲಿ:ಆಟೋರಿಕ್ಷಾ, ಇ-ರಿಕ್ಷಾ, ಟ್ಯಾಕ್ಸಿ, ಫಟ್ ಫಟ್ ಸೇವಾ, ಪರಿಸರ ಸ್ನೇಹಿ ಸೇವಾ, ಗ್ರಾಮೀಣ ಸೇವಾ ಮತ್ತು ಮ್ಯಾಕ್ಸಿ ಕ್ಯಾಬ್‌ಗಳನ್ನು ಹೊಂದಿರುವವರು ಕೋವಿಡ್ ಸಮಯದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು 5 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ದೆಹಲಿ ಕ್ಯಾಬಿನೆಟ್ ಶುಕ್ರವಾರ ಅನುಮೋದನೆ ನೀಡಿದೆ.
ಪ್ಯಾರಾ-ಟ್ರಾನ್ಸಿಟ್ ವಾಹನಗಳ ಸಾರ್ವಜನಿಕ ಸೇವಾ ಬ್ಯಾಡ್ಜ್ (ಚಾಲಕರು) ಮತ್ತು ಪ್ಯಾರಾ-ಟ್ರಾನ್ಸಿಟ್ ಸಾರ್ವಜನಿಕ ಸೇವಾ ವಾಹನಗಳ ಪರವಾನಗಿ ಹೊಂದಿರುವ ಎಲ್ಲ ವ್ಯಕ್ತಿಗಳಿಗೆ ದೆಹಲಿ ಕ್ಯಾಬಿನೆಟ್ 5 ಸಾವಿರ ರೂ. ನೀಡಲು ಅನುಮತಿ ನೀಡಿದೆ.
ದೆಹಲಿ ಸರ್ಕಾರ ಬಿಡುಗಡೆ ಮಾಡಿದ ಪ್ರಕಟನೆ ಪ್ರಕಾರ, 2020 ರಲ್ಲಿ 1.56 ಲಕ್ಷಕ್ಕೂ ಹೆಚ್ಚು ಆಟೋ ಅಥವಾ ಟ್ಯಾಕ್ಸಿ ಚಾಲಕರಿಗೆ 78 ಕೋಟಿ ರೂ. ಅನುದಾನ ನೀಡಲಾಗಿದೆ. 2020 ಯೋಜನೆಯ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ಸ್ಥಳೀಯ ಸಂಸ್ಥೆಗಳ ಪರಿಶೀಲಿಸಿ 5000 ರೂ.ಗಳನ್ನು ನೇರವಾಗಿ ಅವರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮೇ 4 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಿಎಸ್‌ವಿ ಬ್ಯಾಡ್ಜ್ ಸೇರಿದಂತೆ ಪ್ಯಾರಾ-ಟ್ರಾನ್ಸಿಟ್ ವಾಹನಗಳನ್ನು ಹೊಂದಿರುವ ಆಟೋರಿಕ್ಷಾ, ಇ-ರಿಕ್ಷಾ, ಟ್ಯಾಕ್ಸಿ, ಫಟ್ ಫಟ್ ಸೇವಾ, ಪರಿಸರ -ಸ್ನೇಹಿ ಸೇವಾ, ಗ್ರಾಮೀಣ ಸೇವಾ ಮತ್ತು ಮ್ಯಾಕ್ಸಿ ಕ್ಯಾಬ್‌ಗಳಿಗೆ ಒಂದು ಬಾರಿ 5000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು.
2020 ರ ಏಪ್ರಿಲ್‌ನಲ್ಲಿ ದೇಶಾದ್ಯಂತ ಮೊದಲ ಲಾಕ್‌ಡೌನ್ ಹೇರಲಾಗಿತ್ತು. ಈ ಸಮಯದಲ್ಲಿ ದೆಹಲಿ ಸರ್ಕಾರವು ಪಿಎಸ್‌ವಿ ಬ್ಯಾಡ್ಜ್ ಮತ್ತು ಪರವಾನಗಿ ಹೊಂದಿರುವವರು ಜೀವನೋಪಾಯವನ್ನು ಕಳೆದುಕೊಂಡಿರುವವರಿಗೆ ಎರಡು ವಿಭಿನ್ನ ಯೋಜನೆಗಳನ್ನು ಪ್ರಾರಂಭಿಸಿತ್ತು.
ದೆಹಲಿ ಸರ್ಕಾರದ ಪ್ರಕಾರ, ಅಲ್ಲಿ 1,56,350 ಪ್ಯಾರಾ-ಟ್ರಾನ್ಸಿಟ್ ವಾಹನಗಳ ಮಾಲೀಕರು ಈ ಎರಡೂ ಯೋಜನೆಗಳಿಂದ ಲಾಭ ಪಡೆದಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ 2.80 ಲಕ್ಷ ಪಿಎಸ್‌ವಿ ಬ್ಯಾಡ್ಜ್ ಹೊಂದಿರುವವರು ಮತ್ತು 1.90 ಲಕ್ಷ ಪರವಾನಗಿ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈಗಾಗಲೇ ದೆಹಲಿ ಸಾರಿಗೆ ಇಲಾಖೆ ಇದಕ್ಕಾಗಿ ಅಗತ್ಯವಾದ ಬಜೆಟ್ ನಿಬಂಧನೆಗಳನ್ನು ಮಾಡಿದೆ.
ಕಳೆದ ವರ್ಷ ಹಣಕಾಸಿನ ನೆರವು ಪಡೆಯದ ಪ್ಯಾರಾ-ಟ್ರಾನ್ಸಿಟ್ ವಾಹನಗಳ ಎಲ್ಲಾ ಪಿಎಸ್‌ವಿ ಬ್ಯಾಡ್ಜ್ ಮತ್ತು ಪರ್ಮಿಟ್ ಹೊಂದಿರುವವರು ವೆಬ್‌ಸೈಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದಕ್ಕಾಗಿ ದೆಹಲಿ ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಕೆಲವೇ ದಿನಗಳಲ್ಲಿ ಲಿಂಕ್ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಜ್ರಿವಾಲ್ ಸರ್ಕಾರ ತಿಳಿಸಿದೆ.