ನವದೆಹಲಿ:ಕೇಂದ್ರ ಸರ್ಕಾರ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ನಡುವಿನ ಹಗ್ಗಜಗ್ಗಾಟದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, "ದಯವಿಟ್ಟು ದೆಹಲಿಯ ಬಜೆಟ್ ಅನ್ನು ನಿಲ್ಲಿಸಬೇಡಿ" ಎಂದು ಮನವಿ ಮಾಡಿದ್ದಾರೆ.
ಕೇಜ್ರಿವಾಲ್ ಪತ್ರದ ಸಾರಾಂಶ: "ಕಳೆದ 75 ವರ್ಷಗಳ ಇತಿಹಾಸದಲ್ಲಿ ರಾಜ್ಯವೊಂದರ ಬಜೆಟ್ ಸ್ಥಗಿತಗೊಂಡಿರುವುದು ಇದೇ ಮೊದಲು. ನೀವು ದೆಹಲಿ ಜನರ ಮೇಲೆ ಏಕೆ ಕೋಪಗೊಂಡಿದ್ದೀರಿ?. ದಯವಿಟ್ಟು ದೆಹಲಿಯ ಬಜೆಟ್ ಸ್ಥಗಿತಗೊಳಿಸಬೇಡಿ. ಜನರು ಕೈ ಜೋಡಿಸಿ ಮನವಿ ಮಾಡುತ್ತಿದ್ದಾರೆ." ಎಂದು ಅವರು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷ ತನ್ನ ವಾರ್ಷಿಕ ಬಜೆಟ್ 2023-24 ಅನ್ನು ವಿಧಾನಸಭೆಯಲ್ಲಿ ಇಂದು ಮಂಡಿಸುವುದಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಡೆ ನೀಡಿದೆ. ಜಾಹೀರಾತು, ಬಂಡವಾಳ ವೆಚ್ಚದ ಮೇಲಿನ ಖರ್ಚು ಮತ್ತು ಆಯುಷ್ಮಾನ್ ಭಾರತ್ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ಕೇಳಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ರಾಷ್ಟ್ರೀಯ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ಕೇಂದ್ರ ಸರ್ಕಾರವು ಗೂಂಡಾಗಿರಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದು. ಸರ್ಕಾರವೊಂದರ ಬಜೆಟ್ ಅನ್ನು ತಡೆಹಿಡಿದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ದೆಹಲಿಯ ಬಜೆಟ್ ಮಂಗಳವಾರ ಬೆಳಗ್ಗೆ ಮಂಡನೆಯಾಗಬೇಕಿತ್ತು. ಆದರೆ ಕೇಂದ್ರ ನಮ್ಮ ಬಜೆಟ್‌ಗೆ ತಡೆ ನೀಡಿದೆ. ಹಾಗಾಗಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವುದಿಲ್ಲ. ಇಂದಿನಿಂದ, ದೆಹಲಿ ಸರ್ಕಾರದ ನೌಕರರು, ವೈದ್ಯರು ಮತ್ತು ಶಿಕ್ಷಕರು ತಮ್ಮ ಸಂಬಳವನ್ನು ಪಡೆಯುವುದಿಲ್ಲ" ಎಂದು ಸಿಡಿಮಿಡಿಗೊಂಡಿದ್ದರು. ಭಾಷಣದ ವಿಡಿಯೋ ತುಣುಕನ್ನು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿದೆ.
ಸ್ಪಷ್ಟನೆ ಕೇಳಿದ ಗೃಹ ಸಚಿವಾಲಯ: ಮುಖ್ಯಮಂತ್ರಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ, ಎಎಪಿ ಸರ್ಕಾರದಿಂದ ಸ್ಪಷ್ಟೀಕರಣ ಕೇಳಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಬಜೆಟ್ ಪ್ರಸ್ತಾವನೆಯು ಜಾಹೀರಾತಿಗಾಗಿ ಹೆಚ್ಚು ಹಣ ಹಂಚಿಕೆ ಮತ್ತು ಮೂಲಸೌಕರ್ಯ, ಇತರ ಅಭಿವೃದ್ಧಿ ಉಪಕ್ರಮಗಳಿಗೆ ಕಡಿಮೆ ಹಣ ಹೊಂದಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ದಿನಗಳಿಂದ ದೆಹಲಿ ಸರ್ಕಾರದ ಉತ್ತರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಆದಾಗ್ಯೂ, ದೆಹಲಿ ಸರ್ಕಾರ ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ ಬಜೆಟ್‌ನಲ್ಲಿ ಕಳೆದ ವರ್ಷದಂತೆಯೇ ಹಣ ಮೀಸಲಿಟ್ಟಿದೆ ಎಂದು ಹೇಳಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 40 ಪಟ್ಟು ಹೆಚ್ಚು ಖರ್ಚು ಮಾಡಲು ಪ್ರಸ್ತಾಪಿಸಿದೆ. ಗೃಹ ಸಚಿವಾಲಯ ಕೇಳುತ್ತಿರುವ ಸ್ಪಷ್ಟೀಕರಣ ಅಪ್ರಸ್ತುತ ಮತ್ತು ಇದು ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸಲು ಮಾಡುತ್ತಿರುವ ತಂತ್ರ ಎಂದು ದೆಹಲಿ ಹಣಕಾಸು ಸಚಿವ ಕೈಲಾಶ್ ಗಹ್ಲೋಟ್ ಆರೋಪಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಆರ್ಥಿಕ ಸಮೀಕ್ಷೆ ವರದಿ ಮಂಡನೆ: ತಲಾದಾಯ ಕಳೆದ ವರ್ಷಕ್ಕಿಂತ ಶೇ. 14 ರಷ್ಟು ಹೆಚ್ಚಳ