ನವದೆಹಲಿ:ದೆಹಲಿಯ ಲುಟಿನ್ಸ್ನಲ್ಲಿರುವ ಔರಂಗಜೇಬ್ ರಸ್ತೆಗೆ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಗಳು ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ. ಎನ್‌ಡಿಎಂಸಿ ಸದಸ್ಯರ ಸಭೆಯಲ್ಲಿ ರಸ್ತೆಗೆ ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಎನ್‌ಡಿಎಂಸಿ ಆಗಸ್ಟ್ 2015ರಲ್ಲಿ ಔರಂಗಜೇಬ್ ರಸ್ತೆಯ ಹೆಸರನ್ನು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಬದಲಾಯಿಸಿತ್ತು. ಮರುನಾಮಕರಣವಾದ ಅಬ್ದುಲ್ ಕಲಾಂ ರಸ್ತೆಯು ಪೃಥ್ವಿರಾಜ್ ರಸ್ತೆಯನ್ನು ಸಂಪರ್ಕಿಸುತ್ತದೆ.
''ನವದೆಹಲಿಯ ಸೆಕ್ಷನ್ 231ರ ಉಪ-ವಿಭಾಗ(1)ರ ಷರತ್ತು (ಎ) ಪ್ರಕಾರ ಎನ್‌ಡಿಎಂಸಿ ಪ್ರದೇಶದ ಅಡಿಯಲ್ಲಿ ಔರಂಗಜೇಬ್ ರಸ್ತೆಯ ಹೆಸರು ಬದಲಾಯಿಸಲು ಕೌನ್ಸಿಲ್ ಮುಂದೆ ಪ್ರಸ್ತಾವ ಇರಿಸಲಾಗಿತ್ತು. ಮುನ್ಸಿಪಲ್ ಕಾಯಿದೆ-1994 ಅಡಿಯಲ್ಲಿ ಔರಂಗಜೇಬ್ ರಸ್ತೆಯನ್ನು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಅನುಮೋದಿಸಿದೆ'' ಎಂದು ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದರು.
ನೆಹರು ಸ್ಮಾರಕ ವಸ್ತು ಸಂಗ್ರಹಾಲಯ & ಗ್ರಂಥಾಲಯ ಸೊಸೈಟಿ ಹೆಸರು ಬದಲು:ದೆಹಲಿಯ ತೀನ್ ಮೂರ್ತಿ ಭವನದ ಆವರಣದಲ್ಲಿನ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿ ಎಂದು ಹೆಸರು ಬದಲಾಯಿಸಲಾಗಿದೆ. ಪ್ರಧಾನಮಂತ್ರಿಗಳ ಸಂಗ್ರಹಾಲಯ ಉದ್ಘಾಟನೆಗೊಂಡ ಒಂದು ವರ್ಷದ ಬಳಿಕ ಈ ರೀತಿಯ ಬೆಳವಣಿಗೆ ಜುರುಗಿದೆ. ತೀನ್ ಮೂರ್ತಿ ಭವನವು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿತ್ತು. ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿಯ (ಎನ್‌ಎಂಎಂಎಲ್) ವಿಶೇಷ ಸಭೆಯಲ್ಲಿ ಮರುನಾಮಕರಣ ಮಾಡಲು ನಿರ್ಧರಿಸಲಾಗಿತ್ತು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಜೂನ್ 16ರಂದು ಪ್ರಕಟಿಸಿತ್ತು.