ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರಿದಿದೆ. ಶನಿವಾರದ 'ಅತ್ಯಂತ ಕಳಪೆ ಮಟ್ಟ'ಕ್ಕೆ ಹೋಲಿಸಿದರೆ ಭಾನುವಾರ ಬೆಳಗ್ಗೆ 'ಕಳಪೆ' ಮಟ್ಟಕ್ಕೆ ಇಳಿದಿದೆ. ತೀವ್ರ ಕಳಪೆಯಾಗಿದ್ದ ವಾತಾವರಣ ತುಸು ತಹಬದಿಗೆ ಬಂದಿದ್ದು, ಡೀಸೆಲ್ ವಾಹನಗಳ ಪ್ರವೇಶ ಮತ್ತು ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.
ಹವಾಮಾನ ಅಧಿಕಾರಿಗಳ ಪ್ರಕಾರ, ಗಾಳಿಯ ವೇಗ ಮತ್ತು ಅದರ ದಿಕ್ಕಿನಿಂದಾಗಿ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ(AQI) 290 ರಷ್ಟಿತ್ತು. ಇಲ್ಲಿ ಸರಾಸರಿ ಎಕ್ಯೂಐ ಪ್ರತಿ ದಿನ 4 ಗಂಟೆಗೆ ಅಳೆಯಲಾಗುತ್ತದೆ. ಶನಿವಾರ 319, ಶುಕ್ರವಾರ 405 ಮತ್ತು ಗುರುವಾರ 419 ಇತ್ತು. ಇತರೆ ನಗರಗಳಾದ ಘಾಜಿಯಾಬಾದ್ (275), ಗುರುಗ್ರಾಮ್ (242) ಮತ್ತು ನೋಯ್ಡಾದಲ್ಲಿ 252 ಎಕ್ಯೂಐ ದಾಖಲಾಗಿತ್ತು.
ಸಮ-ಬೆಸ ಪದ್ಧತಿ ಜಾರಿ ಆತಂಕ:ಕಳೆದ ಮೂರು ದಿನಗಳ ಹಿಂದೆ ಅಂದರೆ, ಗುರುವಾ ಶುಕ್ರವಾರ, ದೆಹಲಿಯ ವಾಯುಮಾಲಿನ್ಯವು ತೀವ್ರ ಕಳಪೆಯಾಗಿತ್ತು. ವಾತಾವರಣ ಕಲುಷಿತವಾದ ಕಾರಣ ಯಾವುದೇ ಹಂತದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳಿಗೆ 'ಬೆಸ-ಸಮ' ಪದ್ಧತಿಯನ್ನು ಮರು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಬೀಳುವ ಆತಂಕ ಇತ್ತು. ಇದಕ್ಕೆ ಕಾರಣ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಗೆಯು ಗಾಳಿಯನ್ನು ಮತ್ತಷ್ಟು ವಿಷಪೂರಿತ ಮಾಡಿತ್ತು. ಇದರಿಂದ ವಾಯು ಮಾಲಿನ್ಯವು 450 ಎಕ್ಯೂಐ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಸ್ಗೆ ತಲುಪುವ ಆತಂಕ ವ್ಯಕ್ತವಾಗಿದೆ.