ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ಎರಡು ದಿನಗಳ ಕಾಲ ಮುಚ್ಚಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದರು.
ಈ ಕುರಿತು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, "ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಇಂದು ಮತ್ತು ನಾಳೆಯವರೆಗೆ ಮುಚ್ಚಲ್ಪಡುತ್ತವೆ" ಎಂದು ತಿಳಿಸಿದ್ದಾರೆ. ಗುರುಗ್ರಾಮ್‌ನಲ್ಲಿ ವಾಯು ಮಾಲಿನ್ಯವನ್ನು ತಡೆಯಲು ಕ್ರಿಮಿನಲ್ ಪ್ರೊಸೀಜರ್ ಆ್ಯಕ್ಟ್, 1973 ರ ಸೆಕ್ಷನ್ 144 ರ ಅಡಿಯಲ್ಲಿ ಗುರುಗ್ರಾಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ಆದೇಶ ಹೊರಡಿಸಿದ್ದಾರೆ.
ಡಿಸಿ ಆದೇಶದಲ್ಲಿನ ಅಂಶಗಳು: ಕಸ, ಎಲೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್‌ನಂತಹ ತ್ಯಾಜ್ಯ ವಸ್ತುಗಳನ್ನು ಸುಡುವುದನ್ನು ಗುರುಗ್ರಾಮ್‌ನ ಎಲ್ಲಾ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆದೇಶವನ್ನು ಗುರುಗ್ರಾಮ್ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ತಿಳಿಸಿದ್ದಾರೆ.
ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಭಾನುವಾರದಿಂದ 'ಅತ್ಯಂತ ಕಳಪೆ'ಯಾಗಿದೆ. ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ವಾಯು ಗುಣಮಟ್ಟ ನಿರ್ವಹಣಾ ಆಯೋಗವು (ಸಿಎಕ್ಯೂಎಂ) ಮೂರನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ)ಯನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ನಿಷೇಧಿಸಲಾಗಿದೆ. ಅಲ್ಲದೆ, ಎನ್‌ಸಿಆರ್‌ನಲ್ಲಿ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ನಾಲ್ಕು ಚಕ್ರಗಳ ಕಾರ್ಯಾಚರಣೆಯನ್ನು ನಿಷೇಧಿಸುವಂತೆ ಮನವಿ ಮಾಡಲಾಗಿದೆ.
ನವೆಂಬರ್ 2ರ ಸಂಜೆ 4 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 392ರಲ್ಲಿ ದಾಖಲಾಗಿದೆ ಎಂದು ಸಿಎಕ್ಯೂಎಂ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. AQI ಸಂಜೆ 5 ಗಂಟೆಗೆ 402 ತಲುಪಿತು. 401 ದಾಟಿದ ತಕ್ಷಣ ಮೂರನೇ ಹಂತದ ಲಾಕ್‌ಡೌನ್ ಅನ್ನು ಗುರುವಾರ ಸಂಜೆ ತಕ್ಷಣವೇ ಜಾರಿಗೆ ತರಲಾಗಿದೆ. ಈ ಮೂಲಕ ಎನ್‌ಸಿಆರ್‌ನಲ್ಲಿ ನಿರ್ಮಾಣ ಕಾರ್ಯ ಮತ್ತು ಕಟ್ಟಡ ಕೆಡವುವಿಕೆಯನ್ನು ನಿಷೇಧಿಸಲಾಗಿದೆ. ಗ್ರೂಪ್ 3 ರ ಅವಧಿಯಲ್ಲಿ ರೈಲ್ವೆ, ಮೆಟ್ರೋ, ಬಸ್ ಟರ್ಮಿನಲ್, ವಿಮಾನ ನಿಲ್ದಾಣ, ಹೆದ್ದಾರಿ, ರಸ್ತೆ, ಮೇಲ್ಸೇತುವೆ, ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯಗಳಿಗೆ ವಿನಾಯಿತಿ ಇರುತ್ತದೆ.
ಇದನ್ನೂ ಓದಿ:ದೆಹಲಿ ಗಾಳಿ ಗುಣಮಟ್ಟ ಮತ್ತಷ್ಟು ಕಲುಷಿತ: ಸರ್ಕಾರ ಕರೆದ ಸಭೆಗೆ ಅಧಿಕಾರಿಗಳೇ ಗೈರು!
BS3, BS4 ವಾಹನ ನಿಷೇಧಿಸಲು ನಿರ್ದೇಶನ: CAQM ದೆಹಲಿಯ ಜೊತೆಗೆ ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ BS3 ಪೆಟ್ರೋಲ್ ಮತ್ತು BS4 ಡೀಸೆಲ್ ನಾಲ್ಕು-ಚಕ್ರ ವಾಹನಗಳ ಕಾರ್ಯಾಚರಣೆಯನ್ನು ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ದೆಹಲಿ ಎನ್‌ಸಿಆರ್‌ನಲ್ಲಿ ಇಂತಹ ಲಕ್ಷಗಟ್ಟಲೆ ವಾಹನಗಳಿದ್ದು, ಅವುಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.