ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹದಗೆಟ್ಟಿದ್ದು, ಅತ್ಯಂತ ಕಳಪೆ ಹಾಗೂ ತೀವ್ರ ಹಂತಗಳ ನಡುವೆ ನೇತಾಡುತ್ತಿದೆ. ಹೀಗಾಗಿ ಸರ್ಕಾರವು ವಿಶೇಷ ಕಾರ್ಯಪಡೆ ರಚನೆ ಹಾಗೂ ಬೃಹತ್ ಡೀಸೆಲ್ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಸೇರಿ ಹಲವು ಕ್ರಮಗಳನ್ನು ಶುರು ಮಾಡಿದೆ. ಮತ್ತೊಂದೆಡೆ, ದೆಹಲಿ - ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (Air Quality Index - AQI) ಸುಧಾರಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ದೆಹಲಿ ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ.
ಹಲವು ದಿನಗಳಿಂದ ಗಾಳಿಯ ಗುಣಮಟ್ಟ ಕೆಟ್ಟ ಹಂತಕ್ಕೆ ತಲುಪಿದೆ. ಕೆಲ ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಸುಧಾರಣೆ ಕಂಡಿತ್ತು. ದೀಪಾವಳಿ ನಂತರ ಮತ್ತೆ ವಾಯು ಮಾಲಿನ್ಯ ಹೆಚ್ಚಳವಾಗಿತ್ತು. ಆದರೆ, ಇದರ ಬಳಿಕ ಇದೀಗ ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಮತ್ತು ಅದರ ವೇಗ ಹೆಚ್ಚಳದಿಂದಾಗಿ ಗಾಳಿಯ ಗುಣಮಟ್ಟ ಇಂದು ಸುಧಾರಿಸಿದೆ. ಆದಾಗ್ಯೂ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಹಂತದಲ್ಲಿ ಮುಂದುವರಿದೆ ಎಂಬುವುದು ಕಳವಳಕ್ಕೆ ಕಾರಣವಾಗಿದೆ. ಗುರುವಾರ ಸಂಜೆ 4 ಗಂಟೆಗೆ ದಾಖಲಾದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 419ಕ್ಕೆ ತಲುಪಿತ್ತು.
ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೇಳಿಕೆಗಳು, ಭರವಸೆಗಳ ಹೊರತಾಗಿಯೂ, ಈ ಋತುವಿನಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು 'ವಿಷಕಾರಿ' ಪರಿಸ್ಥಿತಿಗೆ ಮುಟ್ಟಿದೆ. ಇದಕ್ಕೆ ಪ್ರಾಥಮಿಕ ಕಾರಣ ಹುಲ್ಲು ಸುಡುವಿಕೆಯಾಗಿದೆ. ಹಲವಾರು ಆರೋಗ್ಯ ತಜ್ಞರು, ಈ ವಿಷಕಾರಿ ಗಾಳಿಯು ಆಸ್ತಮಾ ಅಥವಾ ಉಸಿರಾಟ ಸಂಬಂಧಿತ ಸಮಸ್ಯೆಗಳ ಪೀಡಿತ ರೋಗಿಗಳಿಗೆ ಮಾತ್ರ ಹಾನಿಕಾರಕವಲ್ಲ, ಅದು ಮಾನಸಿಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ಏಮ್ಸ್‌ನ ಸಮುದಾಯ ಮೆಡಿಸಿನ್ ಕೇಂದ್ರದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಹರ್ಷಲ್ ಸಾಳ್ವೆ ಅವರು 'ಈಟಿವಿ ಭಾರತ್'ದೊಂದಿಗೆ ಮಾತನಾಡಿ, ವಾಯು ಮಾಲಿನ್ಯದ ದೊಡ್ಡ ಪರಿಣಾಮವು ಹೃದಯರಕ್ತನಾಳದ ಕಾಯಿಲೆಗಳಾದ ಅಸ್ತಮಾ, ಪಾರ್ಶ್ವವಾಯು, ಹೃದ್ರೋಗದ ಮೇಲೆ ಬೀರಿದೆ. ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಹೃದಯ ರಕ್ತನಾಳದ ಕಾಯಿಲೆಗಳಿಗೆ ಸಂಬಂಧಿಸಿದೆ ಎಂದು ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿನ ಇತ್ತೀಚಿನ ಅಧ್ಯಯನಗಳು ಸಹ ಎತ್ತಿ ತೋರಿಸಿವೆ ಎಂದರು.