ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಇನ್ನು ಕಾಶ್ಮೀರದಲ್ಲಿ ನಡೆಯಲಿರುವ ಮೊದಲ ಜಿ20 ಸಭೆಗೆ ಆಗಮಿಸುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಸಿರಿಧಾನ್ಯಗಳಿಂದ ಮಾಡಿದ ಖಾದ್ಯಗಳನ್ನು ನೀಡಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದಿನಿಂದ 24 ರವರೆಗೆ ಶ್ರೀನಗರದಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (ಜೆಕೆಆರ್ಎಲ್ಎಂ) ಮತ್ತು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್ಎಂ) ಪ್ರತಿನಿಧಿಗಳಿಗೆ ಸಿರಿಧಾನ್ಯ ಭಕ್ಷ್ಯಗಳನ್ನು ಉಣಬಡಿಸಲಿದ್ದೇವೆ ಎಂದು ಜೆಕೆಆರ್ಎಲ್ಎಂ ನಿರ್ದೇಶಕ ಇಂದೂ ಕಾವಲ್ ಚಿಬ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಜೆಕೆಆರ್ಎಲ್ಎಂ ನಿರ್ದೇಶಕ ಇಂದೂ ಕಾವಲ್ ಚಿಬ್ ಮಾತನಾಡಿ, "ದೇಶದಲ್ಲಿ ಎಷ್ಟು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ ಬಯಸಿದೆ. ನಾವು ಇಲ್ಲಿ ಕನಿಷ್ಠ ಎಂಟು ವಿಧದ ಸಿರಿಧಾನ್ಯಗಳನ್ನು ಬೆಳೆಯಲು ಪ್ರಯತ್ನಿಸಿದ್ದೇವೆ ಮತ್ತು ಬೆಳೆಯ ಮಾದರಿಗಳನ್ನು ಸಹ ಇಟ್ಟಿದ್ದೇವೆ" ಎಂದು ಅವರು ಹೇಳಿದರು.
ವಿಶೇಷವೆಂದರೆ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ, ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (ಜೆಕೆಆರ್ಎಲ್ಎಂ) ಸೇರಿ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಒಳಗೆ ವಿಶೇಷ ಮಿಲ್ಲೆಟ್ಸ್ ಕೆಫೆ ತೆರೆದಿದೆ. ಶ್ರೀನಗರದಲ್ಲಿ ಮೂರು ದಿನಗಳ ಜಿ20 ಸಭೆಯಲ್ಲಿ ಪ್ರತಿನಿಧಿಗಳು ಮತ್ತು ಭಾಗವಹಿಸುವವರಿಗೆ ಕೆಫೆಯಿಂದ ಆಹಾರ ನೀಡಲಾಗುತ್ತದೆ.