ಸೀತಾಪುರ (ಉತ್ತರ ಪ್ರದೇಶ):ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸರ್ಕಾರ ಬಂದು ಏಳು ವರ್ಷವಾಯಿತು. ಭ್ರಷ್ಟಾಚಾರ ವಿಚಾರದಲ್ಲಿ ನಮ್ಮ ರಾಜಕೀಯ ನಾಯಕರ ಮೇಲೆ ಯಾರೂ ಕೂಡ ಬೆರಳು ಮಾಡಿಲ್ಲ ಎಂದಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಮಂತ್ರಿಗಳು ಮೇಲಿಂದ ಮೇಲೆ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಸೀತಾಪುರದಲ್ಲಿರುವ ರಾಜನಾಥ್ ಸಿಂಗ್, ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ರೈತರ ಬಗ್ಗೆ ರಕ್ಷಣಾ ಸಚಿವರ ಮಾತು:
ದೇಶದ ರೈತರು ನಮಗೆ ದೇವರಿಗಿಂತಲೂ ಕಡಿಮೆ ಇಲ್ಲ. ಅನ್ನದಾತರನ್ನು ದೇವರೆಂದು ಭಾವಿಸಿದ್ದೇವೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೂರು ಕೃಷಿ ಕಾಯ್ದೆ ಜಾರಿಗೊಳಿಸಲು ಅಂಗೀಕಾರ ಮಾಡಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಪ್ರಧಾನಿ ಮೋದಿ ಹಿಂಪಡೆದುಕೊಂಡರು. ನಾವು ಅಧಿಕಾರದಲ್ಲಿರಲಿ, ಇಲ್ಲದಿರಲಿ ರೈತರ ಮೇಲೆ ದಬ್ಬಾಳಿಕೆ ನಡೆಸುವುದಿಲ್ಲ. ಅವರ ಮುಂದೆ ನಾವು ತಲೆಬಾಗುತ್ತೇವೆ ಎಂದರು.
ಸೀತಾಪುರ ಆಧ್ಯಾತ್ಮಿಕ ಮತ್ತು ಸೂಫಿ ಸಂತರ ನಾಡಾಗಿದ್ದು, ಕಾರ್ಗಿಲ್ ಯುದ್ಧ ವೀರ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಜನ್ಮಸ್ಥಳವಾಗಿದೆ. ದೇಶದ ಅಖಂಡತೆಗಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿರುವ ವೀರರ ನಾಡಿಗೆ ಬಂದಿರುವುದು ನಿಜಕ್ಕೂ ನನಗೆ ಹೆಮ್ಮೆ ಎಂದರು.
ಇದನ್ನೂ ಓದಿ:ಏಷ್ಯಾದ ಅತಿದೊಡ್ಡ 'ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ ಪ್ರಧಾನಿ ಶಂಕುಸ್ಥಾಪನೆ
ಭಾರತದ ಏಕತೆ ಮತ್ತು ಸಮಗ್ರತೆ ಕಾಪಾಡಲು ಸೈನಿಕರ ಅಗತ್ಯವಿರುವ ಹಾಗೆಯೇ ದೇಶದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಪಕ್ಷದ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದರು. ಈ ಹಿಂದೆ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೂ ನಾನು ಬೂತ್ ಮಟ್ಟದ ಅಧ್ಯಕ್ಷರೊಂದಿಗೆ ಮಾತನಾಡಿದ್ದೆನು. ಈಗಲೂ ಹಾಜರಾಗಿದ್ದೇನೆ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಸರ್ಕಾರ ರಚನೆ ಮಾಡಲು ಬಯಸುವುದಿಲ್ಲ. ದೇಶ ಕಟ್ಟಲು ಸರ್ಕಾರ ರಚನೆ ಮಾಡಲು ಬಯಸುತ್ತದೆ. ಇಲ್ಲಿಯವರೆಗೆ ನಾವು ನುಡಿದಂತೆ ನಡೆದುಕೊಂಡು ಬಂದಿದ್ದೇವೆ ಎಂದರು.