ನವದೆಹಲಿ:ತಮಿಳುನಾಡಿನ ಕೂನೂರು ಬಳಿಯ ನೀಲಗಿರಿ ಅರಣ್ಯದಲ್ಲಿ ಬುಧವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ಗೆ ವಿಸ್ತೃತ ವರದಿ ನೀಡಲಿದ್ದಾರೆ. ನಿನ್ನೆಯೇ ಅವರು ಹೆಲಿಕಾಪ್ಟರ್ ಪತನ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿಯ ಸಾವು, ಸಂಭಾವ್ಯ ಕಾರಣಗಳು ಮತ್ತು ತನಿಖೆಯ ಪ್ರಗತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ.
ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅಗತ್ಯ ಕ್ರಮ, ಸಕಲ ಸಿದ್ಧತೆಗಳಿಗೆ ಆದೇಶಿಸಿದ್ದರು. ಅಲ್ಲದೆ, ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹಾಗೂ ಭಾರತೀಯ ವಾಯುಪಡೆ ಮುಖ್ಯಸ್ಥ ವಿ. ಆರ್. ಚೌಧರಿ ಅವರು ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ವಾಯುಪಡೆಯ ಅಧಿಕಾರಿಗಳು ಮೃತರಾಗಿದ್ದು ಅತೀವ ದುಃಖ ಉಂಟು ಮಾಡಿದೆ. ದೇಶಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿದ್ದರು. ಮೃತರ ಕುಟುಂಬಗಳಿಗೆ ತಮ್ಮ ಸಾಂತ್ವನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಅಲ್ಲದೆ ದುರಂತದ ಬಗ್ಗೆ ದೇಶದೆಲ್ಲೆಡೆ ಹಾಗೂ ವಿದೇಶಗಳಿಂದಲೂ ದುಃಖ ವ್ಯಕ್ತವಾಗಿದೆ.