ನವದೆಹಲಿ:ದೇಶದ ಗಡಿ ಮತ್ತು ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಭಾರತೀಯ ಸೇನೆ ಹಿಂಜರಿಯುವುದಿಲ್ಲ. ಚೀನಾದ ಆಕ್ರಮಣವನ್ನು ನಮ್ಮ ಹೆಮ್ಮೆಯ ಸೇನೆ ಹಿಮ್ಮೆಟ್ಟಿಸಿದೆ. ಗಡಿಯಲ್ಲಿ ಶಾಂತಿ ನೆಲೆಗೊಳ್ಳುವಂತೆ ನೋಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ತಿಳಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ಡಿ.9 ರಂದು ವಾಸ್ತವಿಕ ಗಡಿ ರೇಖೆ ದಾಟಿ ಬಂದ ಚೀನಾ ಸೈನಿಕರು, ಭಾರತೀಯ ಸೈನಿಕರ ಜೊತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಉಭಯ ಸೈನಿಕರಿಗೆ ಗಾಯಗಳಾಗಿವೆ. ಯಾವುದೇ ಸೈನಿಕರು ಹುತಾತ್ಮರಾಗಿಲ್ಲ. ತಕ್ಷಣವೇ ಸೈನಿಕರನ್ನು ಆ ಪ್ರದೇಶದಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಗಡಿ ದಾಟಿ ಬಂದ ಚೀನಿ ಸೈನಿಕರನ್ನು ನಮ್ಮ ಯೋಧರು ಹಿಮ್ಮೆಟ್ಟಿಸುವಾಗ ಗಲಾಟೆ ನಡೆದಿದೆ. ಈ ವೇಳೆ ಸೇನಾ ಕಮಾಂಡರ್ಗಳ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಗಲಾಟೆ ತಡೆಯಲಾಗಿದೆ. ಭಾರತೀಯ ಸೇನೆ ದೇಶದ ಗಡಿ ರಕ್ಷಣೆಗೆ ಕಟಿಬದ್ಧವಾಗಿದೆ. ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಸದನದಿಂದ ಹೊರನಡೆದ ವಿಪಕ್ಷಗಳ ಸದಸ್ಯರು:ಅರುಣಾಚಲಪ್ರದೇಶದ ಗಡಿಯಲ್ಲಿ ಚೀನಾ ಸೈನಿಕರು ನಡೆಸಿದ ಗಲಾಟೆ ಮತ್ತು ದೇಶದ ಸಾರ್ವಭೌಮತೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮನವಿ ಮಾಡಿದ್ದರು. ಅದಕ್ಕೆ ಸಭಾಧ್ಯಕ್ಷರು ಅವಕಾಶ ನೀಡದ ಕಾರಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಾ ಸದನದಿಂದಲೇ ಹೊರನಡೆದರು.
ವಿಪಕ್ಷಗಳ ವಿರುದ್ಧ ಅಮಿತ್ ಶಾ ಕೆಂಡ:ಗಡಿ ತಂಟೆಯ ಬಗ್ಗೆ ಚರ್ಚೆಗಾಗಿ ವಿಪಕ್ಷಗಳು ಸದನದಲ್ಲಿ ನಡೆಸಿದ ಗದ್ದಲದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. ರಕ್ಷಣಾ ಸಚಿವರು ಈ ಬಗ್ಗೆ ಉತ್ತರ ನೀಡುವುದಾಗಿ ಹೇಳಿದರೂ, ವಿಪಕ್ಷಗಳು ಗಲಾಟೆ ನಡೆಸಿ ಸದನದ ಸಮಯ ಹಾಳು ಮಾಡಿವೆ. ಇದು ಖಂಡನೀಯ ಎಂದರು.
ರಾಜೀವ್ ಗಾಂಧಿ ಪ್ರತಿಷ್ಠಾನದ ಎಫ್‌ಸಿಆರ್‌ಎ ಉಲ್ಲಂಘನೆಯ ಕುರಿತು ಚರ್ಚಿಸುವುದನ್ನು ತಪ್ಪಿಸಲು ಪ್ರತಿಪಕ್ಷಗಳು ಭಾರತ-ಚೀನಾ ಮುಖಾಮುಖಿಯನ್ನು ಪ್ರಸ್ತಾಪಿಸುತ್ತಿವೆ. ದೇಶದ ಗಡಿಯನ್ನು ನಮ್ಮ ಸೇನೆ ಧೀರೋತ್ತವಾಗಿ ಕಾಪಾಡುತ್ತಿದೆ. ಸದ್ಯಕ್ಕೆ ಶಾಂತಿ ಕಾಪಾಡಲಾಗಿದೆ ಎಂದು ಹೇಳಿದರು.
ಓದಿ:ಚೀನಾ ಮತ್ತೆ ಗಡಿ ತಂಟೆ: ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ, ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ