ಜಮ್ಮು- ಕಾಶ್ಮೀರ:ರಕ್ಷಣಾ ಸಚಿವ ರಾಜನಾಥ್ ಸಿಂಗ್ 2 ದಿನಗಳ ಜಮ್ಮು- ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಇಂದು ಬಾರಾಮುಲ್ಲಾ ಸೇನಾ ಕ್ಯಾಂಪ್ನಲ್ಲಿ ಸೈನಿಕರೊಂದಿಗೆ ಭೋಜನ ಸೇವಿಸಿದರು.
ಸೇನಾ ಕ್ಯಾಂಪ್ಗೆ ಭೇಟಿ ನೀಡಿ ಅಲ್ಲಿನ ಸೈನಿಕರ ಜೊತೆ ಮಾತುಕತೆ ನಡೆಸಿದ ಸಚಿವರು, ಬಳಿಕ ಅವರೊಂದಿಗೆ ಕುಳಿತು ಊಟ ಮಾಡಿದರು. ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಿಂಗ್, ಸೈನಿಕರ ಜೊತೆ ಸಂವಾದ ನಡೆಸಲಿದ್ದಾರೆ. ನಾಳೆ (ಜೂ.17) ಜಮ್ಮುವಿನಲ್ಲಿ ಮಹಾರಾಜ ಗುಲಾಬ್ ಸಿಂಗ್ ಜಿ ಅವರ ರಾಜ್ಯಾಭಿಷೇಕ ಸಮಾರಂಭದ 200ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಸೈನಿಕರೇ ದೇಶದ ರಕ್ಷಣಾ ತಂತಿ:ಬಾರಾಮುಲ್ಲಾದಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗಡಿ ಭದ್ರತಾ ಪಡೆಯನ್ನು(ಬಿಎಸ್ಎಫ್) 'ದೇಶದ ಬೇಲಿ ತಂತಿ'ಗೆ ಹೋಲಿಸಿದರು. ಬಿಎಸ್ಎಫ್ ಯೋಧರು ದೇಶದ ರಕ್ಷಣಾ ಬೇಲಿಯಂತೆ ಕೆಲಸ ಮಾಡುತ್ತಿದ್ದಾರೆ. ಗಡಿಯಲ್ಲಿ ನಿಂತು ದೇಶವನ್ನು ಎದೆಗಾರಿಕೆಯಿಂದ ಕಾಪಾಡುವವರು ಎಂದು ಹೊಗಳಿದ್ದಾರೆ.
ದೇಶವನ್ನು ತುಂಡರಿಲು ಪಾಕಿಸ್ತಾನ ಹೊಂಚು ಹಾಕಿದೆ. ಭಾರತವನ್ನು 1,000 ಹೋಳಾಗುವಂತೆ ಛಿದ್ರ ಮಾಡುವುದೇ ಪಾಕಿಸ್ತಾನದ ನೀತಿಯಾಗಿದೆ. ಆದರೆ, ನೀವು(ಬಿಎಸ್ಎಫ್) ಅದನ್ನು ಮೆಟ್ಟಿನಿಂತು ರಕ್ಷಣಾ ಬೇಲಿಯಾಗಿ ದೇಶವನ್ನು ಕಾಪಾಡುತ್ತಿದ್ದೀರಿ. ದೇಶಕ್ಕೆ ಬೇಲಿಯಂತಿರುವ ನಿಮ್ಮಿಂದ ಅವರೇ ಕತ್ತರಿಸಲ್ಪಡುತ್ತಾರೆ. ಇಡೀ ದೇಶವೇ ನಿಮ್ಮನ್ನು ನಂಬುತ್ತದೆ. ನೀವು ಯಾವುದೇ ಪರಿಸ್ಥಿತಿಗೆ ಸಿದ್ಧರಿದ್ದೀರಿ ಎಂದು ದೇಶಕ್ಕೆ ಗೊತ್ತಿದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇದಕ್ಕೂ ಮೊದಲು ಸಚಿವ ರಾಜನಾಥ್ ಸಿಂಗ್, 2 ವರ್ಷಗಳ ಹಿಂದೆ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಗೌರವ ಸಲ್ಲಿಸಿದರು.
2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆಗಿನ ಹಿಂಸಾತ್ಮಕ ಹೋರಾಟದಲ್ಲಿ 20 ವೀರ ಸೈನಿಕರು ಹುತಾತ್ಮರಾಗಿದ್ದರು. ದೇಶದ ಗೌರವಕ್ಕಾಗಿ ವೀರಾವೇಶದಿಂದ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಗಲ್ವಾನ್ ವೀರರಿಗೆ ನನ್ನ ನಮನ. ಅವರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ದೇಶ ಎಂದಿಗೂ ಮರೆಯಲಾಗದು ಎಂದು ಸಚಿವ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಎನ್ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ