ಹೈದರಾಬಾದ್ : ಶಾಂಘೈ ಸಹಕಾರ ಒಕ್ಕೂಟ (Shanghai Cooperation Organisation -SCO) ದೇಶಗಳ ರಕ್ಷಣಾ ಮಂತ್ರಿಗಳ ಶೃಂಗಸಭೆಯು ಇಂದಿನಿಂದ ಆರಂಭವಾಗಿದ್ದು, ಅದಕ್ಕೂ ಮುನ್ನ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರೊಂದಿಗೆ ಕೈಕುಲುಕದ ರಾಜನಾಥ್ ಸಿಂಗ್ ಚೀನಾಕ್ಕೆ ಪರೋಕ್ಷವಾಗಿ ಭಾರತದ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ತಾಜಿಕಿಸ್ತಾನ್, ಇರಾನ್ ಹಾಗೂ ಕಜಾಕಿಸ್ತಾನ್ ರಕ್ಷಣಾ ಮಂತ್ರಿಗಳ ಕೈಕುಲುಕಿ ಕುಶಲೋಪರಿ ವಿಚಾರಿಸಿದ ಸಿಂಗ್, ಚೀನಾ ರಕ್ಷಣಾ ಸಚಿವರಿಗೆ ಕೇವಲ ಕೈಮುಗಿದು ನಮಸ್ತೆ ಹೇಳಿ ಸುಮ್ಮನಾದರು. ಚೀನಾ ರಕ್ಷಣಾ ಸಚಿವರಿಗೆ ರಾಜನಾಥ್ ಸಿಂಗ್ ಒಂದು ರೀತಿಯಲ್ಲಿ ಮರ್ಯಾದೆ ನೀಡಿ ಮರ್ಯಾದೆ ತೆಗೆದಿರುವುದು ಸ್ಪಷ್ಟ. ಎರಡೂ ದೇಶಗಳ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅರುಣಾಚಲ ಪ್ರದೇಶದಲ್ಲಿ ನುಸುಳಲು ಯತ್ನಿಸುತ್ತಿರುವ ಚೀನಾದ ವಿರುದ್ಧ ಭಾರತ ಆಗಾಗ ಪ್ರಬಲವಾಗಿ ಹೋರಾಟ ನಡೆಸುತ್ತಿರುವುದು ಗಮನಾರ್ಹ.
ಏತನ್ಮಧ್ಯೆ, ರಾಜನಾಥ್ ಸಿಂಗ್ ಅವರು ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಅಭಿವೃದ್ಧಿಯು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಆಧರಿಸಿದೆ ಎಂದು ರಕ್ಷಣಾ ಸಚಿವರು ಸ್ಪಷ್ಟವಾಗಿ ತಿಳಿಸಿದರು.