ಥಾಣೆ( ಮಹಾರಾಷ್ಟ್ರ):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾತಿಗೆ ಶಾಶ್ವತ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಥಾಣೆಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಕೋರ್ಟ್ನಲ್ಲಿ ಈ ಸಂಬಂಧ ರಾಹುಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ ವಿ ಪಲಿವಾಲ್, ದೂರುದಾರ ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರಿಗೆ ಈ ಸಂಬಂಧದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ?:2014 ರಲ್ಲಿ ಥಾಣೆಯ ಭಿವಂಡಿ ಟೌನ್ಶಿಪ್ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕೈವಾಡವಿದೆ ಎಂದು ಹೇಳಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ರಾಹುಲ್ ಅವರ ಈ ಮಾತಿನ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆ ಆರ್ಎಸ್ಎಸ್ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಕುಂಟೆ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ನಲ್ಲಿದ್ದು, ಪದೇ ಪದೇ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ರಾಹುಲ್ ಗಾಂಧಿ ಪರ ವಕೀಲರು ಜೆಎಂಎಫ್ಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು ಸಂಸತ್ ಸದಸ್ಯರಾಗಿರುವ (ಕೇರಳದ ವಯನಾಡ್ನಿಂದ) ಕಾರಣ ತಮ್ಮ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಬೇಕಾಗುತ್ತದೆ ಹಾಗೂ ಪಕ್ಷದ ಕೆಲಸಕ್ಕೆ ಹಾಜರಾಗಬೇಕಿರುವುದರಿಂದ ಸದಾ ಬ್ಯೂಸಿ ಇರುತ್ತೇನೆ. ಆದ್ದರಿಂದ ಘನ ನ್ಯಾಯಾಲಯವು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ರಾಹುಲ್ ಗಾಂಧಿ ಕೋರಿದ್ದಾರೆ.