ನವದೆಹಲಿ: ಮೋದಿ ಉಪನಾಮ ಕುರಿತ ವಿವಾದಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ವಿಧಿಸಲಾದ ಎರಡು ವರ್ಷದ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಗುಜರಾತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮತ್ತು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂಕೋರ್ಟ್ ಸೂಚಿಸಿದೆ.
2019ರ ಲೋಕಸಭೆಯ ಸಂದರ್ಭದಲ್ಲಿ ಎಲ್ಲ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಸಂಬಂಧ ಗುಜರಾತ್ನ ಸೂರತ್ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮಾರ್ಚ್ 23ರಂದು ಪ್ರಕರಣದ ತೀರ್ಪು ನೀಡಿದ್ದ ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ, ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ.
ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪೋಸ್ಟ್: ಅಮಿತ್ ಮಾಳವಿಯಾ ವಿರುದ್ಧದ ತನಿಖೆಗೆ ಮಧ್ಯಂತರ ತಡೆ
ಆದ್ದರಿಂದ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಹುಲ್ ಗಾಂಧಿ ಈ ಅರ್ಜಿ ಬಗ್ಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಪೂರ್ಣೇಶ್ ಮೋದಿ ಹಾಗೂ ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಕಾಂಗ್ರೆಸ್ ನಾಯಕ ರಾಹುಲ್ 111 ದಿನಗಳ ಕಾಲ ನೋವು ಅನುಭವಿಸಿದ್ದಾರೆ. ಈಗಾಗಲೇ ಒಂದು ಸಂಸತ್ ಅಧಿವೇಶನವನ್ನು ಕಳೆದುಕೊಂಡಿದ್ದಾರೆ ಮತ್ತು ಇನ್ನೊಂದು ಅಧಿವೇಶನವನ್ನು ಕಳೆದುಕೊಳ್ಳಲಿದ್ದಾರೆ. ರಾಹುಲ್ ಗಾಂಧಿ ಚುನಾಯಿತರಾಗಿದ್ದ ವಯನಾಡು ಲೋಕಸಭೆ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಿಸಬಹುದು ಎಂದು ಹೇಳಿದರು. ಇದನ್ನು ಆಲಿಸಿ ನ್ಯಾಯ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ 4ರಂದು ಮುಂದೂಡಿತು. ಅಲ್ಲದೇ, ರಾಹುಲ್ ಗಾಂಧಿ ಮೇಲ್ಮನವಿ ಕುರಿತು ಲಿಖಿತ ಪ್ರತಿಕ್ರಿಯೆ ನೀಡುವಂತೆ ಪೂರ್ಣೇಶ್ ಮೋದಿ ಪರ ಮಹೇಶ್ ಜೇಠ್ಮಲಾನಿ ಮತ್ತು ಗುಜರಾತ್ ಸರ್ಕಾರದ ವಕೀಲರಿಗೆ ಸೂಚನೆ ನೀಡಿತು.
ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ: ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಪೂರ್ಣೇಶ್ ಮೋದಿ
ಈ ಅರ್ಜಿ ವಿಚಾರಣೆಯ ಆರಂಭದಲ್ಲಿ ನ್ಯಾಯಮೂರ್ತಿ ಗವಾಯಿ, ತಮ್ಮ ಕುಟುಂಬದ ನಂಟಿನ ರಾಜಕೀಯ ಬಗ್ಗೆ ಎರಡು ಕಡೆಯ ವಕೀಲರಿಗೆ ಮಾಹಿತಿ ನೀಡಿದರು. ತಮ್ಮ ತಂದೆ ಆರ್‌ಎಸ್ ಗವಾಯಿ ಅವರು ಕಾಂಗ್ರೆಸ್ ಸದಸ್ಯರಲ್ಲದಿದ್ದರೂ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಪಕ್ಷದ ಬೆಂಬಲದೊಂದಿಗೆ ಸಂಸದ ಮತ್ತು ಶಾಸಕರಾಗಿದ್ದರು. ತಮ್ಮ ಸಹೋದರ ಕೂಡ ರಾಜಕಾರಣಿ ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆ ಯಾರಿಗಾದರೂ ಸಮಸ್ಯೆ ಇದ್ದರೆ ದಯವಿಟ್ಟು ನನಗೆ ತಿಳಿಸಿ ಎಂದು ನ್ಯಾ.ಗವಾಯಿ ಅವರು ರಾಹುಲ್ ಪರ ವಕೀಲ ಅಭಿಷೇಕ್ ಸಿಂಘ್ವಿ ಮತ್ತು ಪೂರ್ಣೇಶ್ ಮೋದಿ ಪರ ಮಹೇಶ್ ಜೇಠ್ಮಲಾನಿ ಅವರಿಗೆ ಸೂಚಿಸಿದರು. ಇದಕ್ಕೆ ಸಿಂಘ್ವಿ ಮತ್ತು ಜೇಠ್ಮಲಾನಿ ಇಬ್ಬರೂ ಈ ಸಂಗತಿಗಳನ್ನು ತಿಳಿದಿದ್ದರೂ ನ್ಯಾ.ಗವಾಯಿ ಈ ಪ್ರಕರಣವನ್ನು ಆಲಿಸಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಮೋದಿ ಉಪನಾಮ ಪ್ರಕರಣ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕದತಟ್ಟಿದ ರಾಹುಲ್ ಗಾಂಧಿ