ಅಹಮದಾಬಾದ್ : ಮೋದಿ ಉಪನಾಮೆಯ ಕುರಿತ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ತಮಗೆ ಶಿಕ್ಷೆ ವಿಧಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ಕುರಿತು ಇಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಲಿದೆ.
ಗುರುವಾರ ಹೈಕೋರ್ಟ್ ನೀಡಿದ ಮಾಹಿತಿ ಪ್ರಕಾರ, ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ನೇತೃತ್ವದ ಪೀಠವು ಇಂದು ಬೆಳಗ್ಗೆ11:00 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಈ ಹಿಂದೆ ರಾಹುಲ್ ಅವರಿಗೆ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದ್ದ ನ್ಯಾಯಾಲಯ, ಅವರ ಅರ್ಜಿಯನ್ನು ಪರಿಶೀಲನೆಗಾಗಿ ಕಾಯ್ದಿರಿಸಿತ್ತು. ಇದೀಗ, ರಾಹುಲ್ ಗಾಂಧಿ ಅವರ ಅಪರಾಧ ನಿರ್ಣಯಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದರೆ, ಲೋಕಸಭೆ ಸದಸ್ಯತ್ವದಿಂದ ಅವರ ಅನರ್ಹತೆಯನ್ನು ರದ್ದುಗೊಳಿಸಬಹುದು. ಒಂದು ವೇಳೆ ಅಮಾನತಿಗೆ ತಡೆ ನೀಡದಿದ್ದರೆ, ರಾಹುಲ್ ಗಾಂಧಿ ಅವರು ಗುಜರಾತ್ ಹೈಕೋರ್ಟ್‌ನ ಉನ್ನತ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವ ಆಯ್ಕೆ ಹೊಂದಿರುತ್ತಾರೆ.
ಕಳೆದ ಮೇ ತಿಂಗಳಲ್ಲಿ ರಾಹುಲ್ ಗಾಂಧಿಯವರ ಮನವಿ ಆಲಿಸುವಾಗ ನ್ಯಾ. ಪ್ರಚ್ಚಕ್, ಬೇಸಿಗೆ ರಜೆಯ ನಂತರ ಅಂತಿಮ ಆದೇಶವನ್ನು ನೀಡುವುದಾಗಿ ಹೇಳಿ ಯಾವುದೇ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದ್ದರು. ಭಾರತೀಯ ಜನತಾ ಪಕ್ಷದ ಶಾಸಕ ಪೂರ್ಣೇಶ್ ಮೋದಿ ಅವರು 2019ರಲ್ಲಿ ಸಲ್ಲಿಸಿದ್ದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ದೋಷಾರೋಪಣೆ ಮಾಡಿದ ನಂತರ ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗೆ ಮಾರ್ಚ್ 23ರಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.