ನವದೆಹಲಿ:ರಫೇಲ್ ಯುದ್ಧ ವಿಮಾನಗಳ ಒಪ್ಪಂದದಡಿ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು (ಆಫ್‌ಸೆಟ್) ಒದಗಿಸುವಲ್ಲಿ ವಿಳಂಬ ಮಾಡಿದ ಯುರೋಪ್ನ ಪ್ರಮುಖ ಕ್ಷಿಪಣಿ ತಯಾರಿಕಾ ಸಂಸ್ಥೆ ಎಂಬಿಡಿಎಗೆ ಭಾರತ 8.52 ಕೋಟಿ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ, ಕಂಪನಿ ದಂಡದ ಮೊತ್ತವನ್ನು ಪಾವತಿಸಿದೆ.
ಫ್ರಾನ್ಸ್ ತಯಾರಿಸುವ ಯುದ್ಧ ವಿಮಾನಗಳಾದ ರಫೇಲ್ ಒಪ್ಪಂದದ ವೇಳೆ, ವಿಮಾನಗಳಿಗೆ ಪೂರಕವಾದ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನೂ ಒದಗಿಸುವ ಬಗ್ಗೆಯೂ ಡಸಾಲ್ಟ್ ಏವಿಯೇಷನ್ನ ಅಂಗಸಂಸ್ಥೆಯಾದ ಎಂಬಿಡಿಎ ಜೊತೆಗೂ ಭಾರತ ಸಣ್ಣ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರಂತೆ ಆಫ್ಸೆಟ್ಗಳನ್ನು ಒದಗಿಸುವಲ್ಲಿ ವಿಫಲವಾದ ಕಾರಣ ಸಂಸ್ಥೆಗೆ ಭಾರತ ದಂಡ ಹಾಕಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
2016ರ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರ ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಜೊತೆಗೆ 36 ರಫೇಲ್ ಯುದ್ಧ ವಿಮಾನಗಳ ಪೂರೈಕೆಗೆ 59 ಸಾವಿರ ಕೋಟಿ ರೂಪಾಯಿಗಳ ಅಂತರ್ ಸರ್ಕಾರಿ ಒಪ್ಪಂದ ಮಾಡಿಕೊಂಡಿತ್ತು. ಇದೇ ವೇಳೆ, ಡಸಾಲ್ಟ್ ಏವಿಯೇಷನ್ ಸಂಸ್ಥೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಎಂಬಿಡಿಎ ಸಂಸ್ಥೆಯ ಜೊತೆಗೂ ಯುದ್ಧ ವಿಮಾನಗಳಿಗೆ ಪೂರಕವಾದ ಶಸ್ತ್ರಾಸ್ತ್ರಗಳ ಪೂರೈಕೆಗೂ 7.8 ಯುರೋ ಬಿಲಿಯನ್ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದ ಅಡಿ ಮೌಲ್ಯದ ಶೇ.50ರಷ್ಟು ಭಾರತಕ್ಕೆ ಆಫ್‌ಸೆಟ್ ಅಥವಾ ಮರು ಹೂಡಿಕೆ ರೂಪದಲ್ಲಿ ಮರಳಿಸಬೇಕಿತ್ತು. ರಫೇಲ್ ಒಪ್ಪಂದದಲ್ಲಿನ ಆಫ್‌ಸೆಟ್‌ಗಳು ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಏಳು ವರ್ಷಗಳ ಅವಧಿಯವರೆಗಿದ್ದು, ಮೊದಲ ಮೂರು ವರ್ಷ ಯಾವುದೇ ಪೂರೈಕೆ ಇರಲಿಲ್ಲ.