ಮುಂಬೈ: ಏಳು ತಿಂಗಳ ಹಿಂದೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ವನ್ಯ ಜಿಂಕೆ ಮರಿಯೊಂದು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ಮನಸಿಗೆ ಸಮಾಧಾನ ತರುವ ಸಂಗತಿಯಾಗಿದೆ. ಗಾಯದಿಂದ ಪೂರ್ಣ ಆರಾಮವಾಗಿರುವ ಜಿಂಕೆಯನ್ನು ಸದ್ಯ ಥಾಣೆ ಕಾಡಿನಲ್ಲಿ ಬಿಡಲಾಗಿದೆ ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಮತ್ತು ಆಘಾತಕ್ಕೊಳಗಾದ ಹೆಣ್ಣು ಜಿಂಕೆಯೊಂದನ್ನು ಈ ವರ್ಷದ ಜನವರಿಯಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆ ರೇಂಜರ್ಗಳು ಥಾಣೆಯ ಟೋಕವಾಡೆ ಅರಣ್ಯ ವಲಯದಲ್ಲಿ ಪತ್ತೆ ಮಾಡಿದ್ದರು.
ಸುಮಾರು ಒಂಬತ್ತು ತಿಂಗಳ ವಯಸ್ಸಿನ ಜಿಂಕೆ ಗಂಭೀರ ಸ್ಥಿತಿಯಲ್ಲಿ ತೀವ್ರ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಆರ್ಎಫ್ಓ ಪ್ರದೀಪ್ ರೌಂಡಾಲ್ ಅವರ ತಂಡವು ಚಿಕಿತ್ಸೆಗಾಗಿ ವನ್ಯಜೀವಿ ಎಸ್ಒಎಸ್ (ಡಬ್ಲ್ಯುಎಸ್ಒಎಸ್) ಪಶುವೈದ್ಯ ತಜ್ಞರ ಬಳಿಗೆ ಧಾವಿಸಿತು. ನಾಯಿ ಕಡಿತ ಅಥವಾ ಇತರ ಯಾವುದೋ ಪ್ರಾಣಿಯ ದಾಳಿಯಿಂದ ಜಿಂಕೆಯ ದೇಹಕ್ಕೆಲ್ಲ ಗಾಯಗಳಾಗಿವೆ ಎಂದು ಪಶುವೈದ್ಯರ ತಂಡ ಹೇಳಿತ್ತು. ಅಲ್ಲದೆ ಮೇಲಿನಿಂದ ಬಿದ್ದಿದ್ದರಿಂದ ಮೂಳೆ ಮುರಿತವೂ ಆಗಿತ್ತು.
ಜಿಂಕೆಯ ಗಂಭೀರ ಸ್ಥಿತಿಯನ್ನು ನೋಡಿದ ಪಶುವೈದ್ಯರು ಅದನ್ನು ಹೇಗಾದರೂ ಮಾಡಿ ಬದುಕಿಸಲೇಬೇಕೆಂದು ತೀರ್ಮಾನಿಸಿದರು. ಮೊದಲಿಗೆ ಜುನ್ನಾರ್ (ಪುಣೆ) ನಲ್ಲಿರುವ ಮಾಣಿಕ್ಡೋ ಚಿರತೆ ರಕ್ಷಣಾ ಕೇಂದ್ರದಲ್ಲಿ ಜಿಂಕೆಗೆ ಚಿಕಿತ್ಸೆ ನೀಡಲಾಯಿತು ಎಂದು ಡಬ್ಲ್ಯುಎಸ್ಒಎಸ್ ನ ಪಶುವೈದ್ಯ ಅಧಿಕಾರಿ ಡಾ. ಚಂದನ್ ಸಾವನೆ ತಿಳಿಸಿದ್ದಾರೆ.
ಇದನ್ನೂ ಓದಿ : ಜಿಂಕೆ ರಕ್ಷಣೆಗೆ ಕ್ರಮ: ಮಾಂಸಹಾರಿ ಪ್ರಾಣಿಗಳಿಲ್ಲದ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆ- ವಿಡಿಯೋ