ನವದೆಹಲಿ:ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ನ ಉಗ್ರಗಾಮಿ ಸಂಘಟನೆಯಾದ ಹಮಾಸ್ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. "ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಮ್ಮ ವಿಚಾರಗಳು ಮತ್ತು ಪ್ರಾರ್ಥನೆಗಳು ಅಮಾಯಕ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇರಲಿವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್ ಜೊತೆಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ'' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿ ಬೆನ್ನಲ್ಲೆ ಪ್ರಧಾನಿ ಮೋದಿ ಈ ಟ್ವೀಟ್ ಮಾಡಿದ್ದಾರೆ. ಹಮಾಸ್‌ನ ಹಲವು ಉಗ್ರಗಾಮಿಗಳು ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಹಲವಾರು ಸ್ಥಳಗಳಲ್ಲಿ ಇಸ್ರೇಲ್‌ನ ಬಿಗಿಭದ್ರತೆಯ ಗಡಿಯನ್ನು ನುಸುಳಿದ್ದಾರೆ. ಅಲ್ಲದೇ, ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಠಾತ್ ದಾಳಿ.. 'ಯುದ್ಧ' ಘೋಷಿಸಿದ ಪ್ರಧಾನಿ ನೆತನ್ಯಾಹು
ಈ ದಾಳಿ ಕುರಿತು ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಯುದ್ಧ'ದಲ್ಲಿ ತೊಡಗಿದ್ದೇವೆ. ಅಲ್ಲದೇ, ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕ ಒಳನುಸುಳುಕೋರರನ್ನು ಹೊರಹಾಕಲು ಆದೇಶಿಸಲಾಗಿದೆ. ಮೀಸಲು ಪಡೆಗಳನ್ನು ಸಜ್ಜುಗೊಳಿಸಲು ಸೂಚಿಸಲಾಗಿದೆ. ಶತ್ರುಗಳು ಅರಿದ ಪ್ರಮಾಣದ ಪ್ರತಿದಾಳಿಯನ್ನು ನೀಡಲಿದ್ದೇವೆ. ಇಸ್ರೇಲ್‌ನ ರಕ್ಷಣಾ ಪಡೆ ಮತ್ತು ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಇಸ್ರೇಲ್ ನಾಗರಿಕರು ಪಾಲಿಸಬೇಕು. ನಾವು ಯುದ್ಧವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಸುಮಾರು 22 ಜನರ ಸಾವು:ಹಮಾಸ್ ಉಗ್ರಗಾಮಿಗಳ ದಾಳಿಯಲ್ಲಿ ಇದುವರೆಗೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಸುಮಾರು 280 ಇಸ್ರೇಲ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ನ ರಾಷ್ಟ್ರೀಯ ರಕ್ಷಣಾ ಸೇನೆ ಮೃತರ ಸಂಖ್ಯೆಯನ್ನು ಖಚಿತಪಡಿಸಿದೆ. ದಾಳಿಕೋರರು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸೈನಿಕರನ್ನೂ ಅಪಹರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಪೊಲೀಸರ ಅಂದಾಜಿನ ಪ್ರಕಾರ, ಸುಮಾರು 60 ಜನ ನುಸುಳುಕೋರರು 14 ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆ. ಈ ದಾಳಿಯು 1973ರ ಯುದ್ಧವನ್ನು ನೆನಪಿಸುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಸಿಮ್ಚಾಟ್ ಟೋರಾ ಮೇಲೆ ಗಂಭೀರ ದಾಳಿ ನಡೆಸಿತ್ತು. ಈ ಸಂದರ್ಭದಲ್ಲೂ ಇಸ್ರೇಲ್‌ನ ಶತ್ರುಗಳು ಯೋಮ್ ಕಿಪ್ಪೂರ್ ಮೇಲೆ ಹಠಾತ್ ದಾಳಿ ನಡೆಸಿದ್ದರು.