ನವದೆಹಲಿ:ಅಮೆರಿಕದ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ, ಇದು ಭಾರತ ಮತ್ತು ಅಮೆರಿಕ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಸುವ ಪ್ರತೀಕ ಎಂದಿದ್ದಾರೆ.
ಭಾರತದ ನಾಯಕರಾಗಿ ಮಾಡಿದ ಅಸಾಧಾರಣ ಸೇವೆ ಪರಿಗಣಿಸಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಅನ್ನು ಉಡುಗೊರೆಯಾಗಿ ನೀಡಿದ್ದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೋದಿ ಟ್ವೀಟ್ ಮಾಡಿ ಈ ಹೇಳಿಕೆ ನೀಡಿದ್ದಾರೆ.
ತಮ್ಮ ಈ ಅತ್ಯುನ್ನತ ಪ್ರಶಸ್ತಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕಾ-ಭಾರತ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ತಮ್ಮ ದೃಢ ನಿಶ್ಚಯ ಹಾಗೂ ಬದ್ಧತೆಯೊಂದಿಗೆ ಅಮೆರಿಕಾ ಸರ್ಕಾರ ಹಾಗೂ ಇತರ ಪಾಲುದಾರರೊಂದಿಗೆ ಕಾರ್ಯವನ್ನು ಮುಂದುವರೆಸುವುದಾಗಿಯೂ ಮೋದಿ ಹೇಳಿದ್ದಾರೆ.
21ನೇ ಶತಮಾನವು ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳನ್ನು ಒದಗಿಸಿದೆ. ಅಲ್ಲದೇ ಇಡೀ ಮಾನವೀಯತೆಯ ಅನುಕೂಲಕ್ಕಾಗಿ ಜಾಗತಿಕ ನಾಯಕತ್ವವನ್ನು ಒದಗಿಸಲು ನಮ್ಮ ಜನರ ಅನನ್ಯ ಸಾಮರ್ಥ್ಯವನ್ನು ಉಭಯ ರಾಷ್ಟ್ರಗಳ ಸಂಬಂಧ ಬಳಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಶ್ವೇತಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಅಮೆರಿಕದಲ್ಲಿನ ಭಾರತದ ರಾಯಭಾರಿ ತರನ್ ಜಿನ್ ಸಿಂಗ್ ಸಂಧು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯನ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಉಭಯ ರಾಷ್ಟ್ರಗಳ ಸಂಬಂಧ ಹೆಚ್ಚಿಸುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ಮೋದಿಗೆ ಅಮೆರಿಕದ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಅನ್ನು ಪ್ರದಾನ ಮಾಡಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಸಿ.ಒ 'ಬ್ರಿಯಾನ್ ಮಾಹಿತಿ ನೀಡಿದರು.
ವಿದೇಶಿ ಅಧಿಕಾರಿಗಳಿಗೆ ನೀಡಬಹುದಾದ ಅತ್ಯುನ್ನತ ಮಿಲಿಟರಿ ಪದಕಗಳಲ್ಲಿ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ಕೂಡ ಒಂದು. ಅತ್ಯುತ್ತಮ ಸೇವೆ ಹಾಗೂ ಸಾಧನೆಗಳ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.