ಬೋಲಂಗಿರ್: ಒಡಿಶಾದ ಬೋಲಂಗಿರ್ ಜಿಲ್ಲೆಯ ಸಾಲೆಪಾಲಿ ಪಟ್ಟಣದ ಬೀಗ ಹಾಕಿದ ಮನೆಯ ಕೋಣೆಯೊಂದರಲ್ಲಿ ಯುವಕನ ಮೃತದೇಹವೊಂದು 12 ತುಂಡುಗಳಾಗಿ ಕತ್ತರಿಸಿ ಪಾಲಿಥಿನ್ ಬ್ಯಾಗ್ನಲ್ಲಿ ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರನ್ನು ರಿಂಕು ಮೆಹರ್ (27) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಮನೆಯ ಒಳಗಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬೋಳಂಗಿರ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮನೆ ಬಾಗಿಲು ಒಡೆದು ಒಳಹೋದಾಗ, ದೇಹದ ಭಾಗಗಳನ್ನು ಕತ್ತರಿಸಿ ಏಳು ಕ್ಯಾರಿ ಬ್ಯಾಗ್ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಜೊತೆಗೆ, ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು.
ಮಾಹಿತಿಯ ಪ್ರಕಾರ, ರಿಂಕು ಮೆಹರ್ ತನ್ನ ಕಿರಿಯ ಸಹೋದರ ಹಾಗೂ ಪೋಷಕರೊಂದಿಗೆ ಸಾಲೇಪಾಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ (ಸುಮಾರು 20 ದಿನಗಳು) ರಿಂಕು ತನ್ನ ತಂದೆ ಹಾಗೂ ತಾಯಿಗೆ ಹೊಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಬುರ್ಲಾ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ರಿಂಕು ಕಿರಿಯ ಸಹೋದರ ತಂದೆ ತಾಯಿಯನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಹೋದವರು ಮತ್ತೆ ಮನೆ ಕಡೆಗೆ ಬಂದಿಲ್ಲ. ಇತ್ತ ಮನೆಯಲ್ಲಿ ರಿಂಕು ಅವರು ಒಬ್ಬರೇ ಮನೆಯಲ್ಲಿದ್ದರು. ಇದಾದ ಕೆಲ ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಬೋಳಂಗಿರ್ ಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.