ಶಹಜಹಾನ್ಪುರ (ಉತ್ತರ ಪ್ರದೇಶ): ಅಪರಿಚಿತ ವ್ಯಕ್ತಿಯೊಬ್ಬನ ಕೊಳೆತ ಮೃತದೇಹ ಅಮೃತಸರದಿಂದ ಹೊರಟ ಜನಸೇವಾ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಉತ್ತರ ಪ್ರದೇಶದ ಶಹಜಹಾನ್‍ಪುರ ಜಿಲ್ಲೆಯ ರೋಝಾ ನಿಲ್ದಾಣದಲ್ಲಿ ಪತ್ತೆಯಾಗಿದೆ.
ಬಿಹಾರದ ಬನ್‍ಮಂಖಿ ಜಂಕ್ಷನ್‍ನಿಂದ 900 ಕಿ.ಮೀ ದೂರ ರೈಲು ಹೋಗುವವರೆಗೂ ಈ ಮೃತದೇಹ ಯಾರ ಗಮನಕ್ಕೂ ಬರಲಿಲ್ಲ ಎನ್ನಲಾಗಿದೆ. ಮುಚ್ಚಿದ ರೈಲು ಶೌಚಾಲಯದಿಂದ ಕೊಳೆತ ದೇಹದ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಸರ್ಕಾರಿ ರೈಲ್ವೆ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಕರುಣೇಶ್ ಚಂದ್ರ ಶುಕ್ಲಾ, 'ರೈಲು ಸಿಬ್ಬಂದಿಯ ಜತೆಗೆ ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಕಂಡುಬಂದಿದೆ. ಐದು ಗಂಟೆ ನಿಲುಗಡೆ ಬಳಿಕ ಅಮೃತಸರಕ್ಕೆ ರೈಲು ತೆರಳಿತು. ಅಪರಿಚಿತ ವ್ಯಕ್ತಿ ಹಸಿರು ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದ. ಆತನಲ್ಲಿ ಯಾವುದೇ ಐಡಿ ಕಾರ್ಡ್ ಇರಲಿಲ್ಲ. ಜಿಆರ್‌ಪಿ ಸ್ಟೇಷನ್‍ಗಳಿಗೆ ಮಾಹಿತಿ ನೀಡಲಾಗಿದೆ. ಶೌಚಾಲಯದ ಒಳಗಿನಿಂದ ಬಾಗಿಲು ಹಾಕಿಕೊಂಡ ಕಾರಣ ಯಾವುದೇ ಸಂಶಯಕ್ಕೆ ಆಸ್ಪದವಿರಲಿಲ್ಲ' ಎಂದು ಹೇಳಿದರು.