ನವದೆಹಲಿ:ಸಾಮಾನ್ಯವಾಗಿ ಮನುಷ್ಯರು ಹೇಗೆ ಬದುಕುಳಿಯಲು ಆಸ್ಪತ್ರೆಗಳು ಮತ್ತು ಚಿಕಿತ್ಸೆಯ ಮೊರೆ ಹೋಗುತ್ತಾರೋ, ಅದೇ ರೀತಿ ವೈರಸ್ಗಳೂ ಕೂಡಾ ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು, ಜೀನ್ಗಳನ್ನು ಬದಲಾಯಿಸಿಕೊಳ್ಳುತ್ತವೆ. ಇವುಗಳನ್ನು ರೂಪಾಂತರ ವೈರಸ್ಗಳು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಮ್ಯೂಟೆಂಟ್ಗಳು ಅಥವಾ ವೇರಿಯಂಟ್ಗಳು ಎಂದು ಕರೆಯಲಾಗುತ್ತದೆ.
ಈಗ ಕೊರೊನಾ ತೀವ್ರವಾಗಿರುವ ಸಮಯದಲ್ಲಿ ಕೋವಿಡ್ ವೈರಸ್ ಕೂಡಾ ತನ್ನ ಉಳಿವಿಗಾಗಿ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಆ ರೂಪಗಳಲ್ಲಿ ಕೆಲವೊಂದು ಸೌಮ್ಯವಾಗಿದ್ದರೆ, ಇನ್ನೂ ಕೆಲವು ರೂಪಗಳು ತೀವ್ರ ಹಾನಿ ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ.
ಮೊದಲಿಗೆ ಈ ವೇರಿಯಂಟ್ಗಳನ್ನು ಸಂಕೇತಾಕ್ಷರಗಳಿಂದ ಕರೆಯಲಾಗುತ್ತಿತ್ತು(ಉದಾಹರಣೆಗೆ B.1.617.2, ಅಥವಾ B.1.617.2) ಇವುಗಳನ್ನು ನೆನಪಿನಲ್ಲಿಡಲು ಮತ್ತು ಉಚ್ಚರಿಸಲು ಹಾಗೂ ಸಂವಹನಕ್ಕೆ ಕಷ್ಟವಾಗುವ ಕಾರಣದಿಂದಾಗಿ ಯಾವ ದೇಶದಲ್ಲಿ ಕೋವಿಡ್ ವೈರಸ್ ರೂಪಾಂತರ ಕಾಣಿಸಿಕೊಳ್ಳುತ್ತದೆಯೋ, ಅದೇ ದೇಶದ ಹೆಸರನ್ನು ಸೇರಿಸಿ, ವೈರಸ್ ಅನ್ನು ಹೆಸರಿಸಲಾಗುತ್ತಿತ್ತು (ಉದಾಹರಣೆ ಆಫ್ರಿಕಾ ವೇರಿಯಂಟ್, ಯುಕೆ ವೇರಿಯಂಟ್ ಇತ್ಯಾದಿ) . ಈ ರೀತಿ ಹೆಸರಿಸುವ ಪದ್ಧತಿಗೆ ತೀವ್ರ ಆಕ್ಷೇಪ ಕಂಡು ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಘಟನೆ, ದೇಶಗಳ ಹೆಸರು ಬಿಟ್ಟು ಬೇರೆ ರೀತಿಯಲ್ಲಿ ಹೆಸರಿಡಬೇಕೆಂದು ಸೂಚನೆ ನೀಡಿತು.
ಈಗ ಗ್ರೀಕ್ ವರ್ಣಮಾಲೆಯ ಅಕ್ಷರಗಳನ್ನು ಬಳಸಿ, ಅಥವಾ ಬೇರೆ ಬೇರೆ ಪದಗಳಿಂದ ಕೋವಿಡ್ ವೈರಸ್ ವೇರಿಯಂಟ್ಗಳನ್ನು ಗುರ್ತಿಸಲಾಗುತ್ತಿದೆ. ಇವುಗಳಲ್ಲಿ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ ಮುಖ್ಯವಾದ ವೇರಿಯಂಟ್ಗಳು ಎಂದು ಗುರ್ತಿಸಲಾಗಿದೆ. ಅಧಿಕೃತವಾಗಿ 7 ಸಾವಿರಕ್ಕೂ ಹೆಚ್ಚು ವೇರಿಯಂಟ್ಗಳು ಅಸ್ಥಿತ್ವದಲ್ಲಿವೆ ಎಂದು ಹೇಳಲಾಗುತ್ತಿದೆ. ಈ ವೇರಿಯಂಟ್ಗಳಲ್ಲಿ ಕೆಲವೊಂದು ಸಾಕಷ್ಟು ಅಪಾಯಕಾರಿ ಎಂದು ಹೇಳಲಾಗುತ್ತಿದೆ.
ಮೊದಲೇ ಹೇಳಿದಂತೆ ವೈರಸ್ಗಳು ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು ಬದಲಾಯಿಸಿಕೊಳ್ಳುವಂತೆ, ರೂಪಾಂತರಿ ವೈರಸ್ಗಳೂ ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು ಬದಲಾಯಿಸಕೊಳ್ಳುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದದು ಡೆಲ್ಟಾ ವೈರಸ್.. ಕೆಲವು ಅಧಿಕೃತ ಮಾಹಿತಿ ಪ್ರಕಾರ ಭಾರತದಲ್ಲಿ ಅತ್ಯಧಿಕ ಸಾವು ನೋವಿನ ಪ್ರಮಾಣಕ್ಕೆ ಕಾರಣವಾಗಿದೆ. ಈ ವೈರಸ್ ಕೂಡಾ ಡೆಲ್ಟಾ ಪ್ಲಸ್ ಆಗಿ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ.
ಡೆಲ್ಟಾ ಪ್ಲಸ್ ಏನು?
ಡೆಲ್ಟಾ ಪ್ಲಸ್ ಮೊದಲೇ ಹೇಳಿದಂತೆ ಡೆಲ್ಟಾ ವೈರಸ್ನ ಮ್ಯೂಟೆಂಟ್. ಈ ವೈರಸ್ ಅನ್ನು ತಾಂತ್ರಿಕವಾಗಿ B.1.617.2.1 ಅಥವಾ AY.1 ಎಂದು ಕರೆಯಲಾಗುತ್ತದೆ. ಡೆಲ್ಟಾ ಪ್ಲಸ್ನ ಮೂಲ ವೈರಸ್ ಆದ ಡೆಲ್ಟಾ ವೈರಸ್ ಮೊದಲ ಬಾರಿಗೆ ಭಾರತದಲ್ಲಿ ಹಿಂದಿನ ವರ್ಷವೇ ಕಂಡು ಬಂದಿತ್ತು.
ಭಾರತದಲ್ಲಿ ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದೇ ಕಾರಣ ಮಾತ್ರವಲ್ಲದೇ, ಯೂರೋಪ್ ರಾಷ್ಟ್ರಗಳಿಗೂ ಕೂಡಾ ಸಾಕಷ್ಟು ಕಿರಿಕಿರಿ ಉಂಟುಮಾಡಿತ್ತು. ಈಗ ಡೆಲ್ಟಾ ವೈರಸ್ನ ರೂಪಾಂತರ ಡೆಲ್ಟಾ ಪ್ಲಸ್ ಯೂರೋಪ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಭಾರತದ ಹಲವೆಡೆಯೂ ಈ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಗೆ ಕಾರಣವಾಗಿದೆ.