ಥಾಣೆ (ಮಹಾರಾಷ್ಟ್ರ): ಸತ್ತಿದ್ದಾನೆಂದು ಘೋಷಿಸಲಾಗಿದ್ದ ವ್ಯಕ್ತಿ ಆ್ಯಂಬುಲೆನ್ಸ್ನಲ್ಲಿ ಕಣ್ಣುಬಿಟ್ಟು ಮಾತನಾಡಿದ್ದ ವಿಡಿಯೋ ನಾಲ್ಕು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಈ ವೈರಲ್ ವಿಡಿಯೋದಲ್ಲಿರುವವರು ನಮ್ಮ ತಂದೆ ಎಂದು ಥಾಣೆಯ ಉಲ್ಹಾಸ್ ನಗರದ ನಿವಾಸಿ ನಿರ್ಮಲಾ ಗುಪ್ತಾ ಎಂಬಾಕೆ ಹೇಳಿಕೊಂಡಿದ್ದಾರೆ.
ಪಿಪಿಇ ಕಿಟ್ನಲ್ಲಿ ಸುತ್ತಿ ಆ್ಯಂಬುಲೆನ್ಸ್ನಲ್ಲಿ ಸಾಗಿಸುವಾಗ ಆ ವ್ಯಕ್ತಿ ಉಸಿರಾಡಿದ್ದು, ಜೀವಂತವಿರುವಾಗಲೇ ಸತ್ತಿದ್ದಾನೆ ಎಂದು ಘೋಷಿಸಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಆತನ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಆಕೆಯ ಪುತ್ರಿ ಇವರು ನಮ್ಮ ತಂದೆ ರಾಮ್ ಶರಣ್ ಗುಪ್ತಾ ಎಂದು ಗುರುತು ಪತ್ತೆ ಮಾಡಿದ್ದಾಳೆ.
ಸತ್ತಿದ್ಧಾನೆಂದು ಘೋಷಿಸಿದ್ದ ವ್ಯಕ್ತಿ ಆ್ಯಂಬುಲೆನ್ಸ್ನಲ್ಲಿ ಉಸಿರಾಟ ಈ ಘಟನೆ ಸಂಬಂಧ ಮಹಿಳೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದು, ಈ ವಿಡಿಯೋ ಯಾವಾಗ ಚಿತ್ರಿಸಲಾಗಿದೆ ಎಂಬ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಸತ್ತನೆಂದು ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬಸ್ಥರು
10 ತಿಂಗಳ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಹಿಂದಿನ ರಹಸ್ಯ ಬಗೆಹರಿಯದೇ ಉಳಿದಿದೆ. ಕಳೆದ ವರ್ಷದ ಜೂನ್ 24ರಂದು ನ್ಯೂಮೋನಿಯಾ ಲಕ್ಷಣ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲಾಗಿದ್ದರು. ಇವರಿಗೆ ಜೂನ್ 27ರಂದು ಕೊರೊನಾ ದೃಢವಾಗಿತ್ತು. ಬಳಿಕ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಜೂನ್ 29ರಂದು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ಘೋಷಿಸಿದ್ದು, ಬಳಿಕ ಕುಟುಂಬಸ್ಥರನ್ನು ಅಂತ್ಯಕ್ರಿಯೆ ನಡೆಯುವ ಜಾಗಕ್ಕೆ ಬರಲು ತಿಳಿಸಿತ್ತು.
ಇದೇ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಪಿಪಿಇ ಕಿಟ್ನಲ್ಲಿ ಸುತ್ತಲಾಗಿದ್ದ ಮೃತದೇಹದ ಗಾತ್ರ ಕಂಡು ಅನುಮಾನ ಮೂಡಿತ್ತು. ಆದರೆ, ಕೋವಿಡ್ನಿಂದ ಮೃತಪಟ್ಟ ಹಿನ್ನೆಲೆ ಮುಖ ತೋರಿಸಲು ಸಿಬ್ಬಂದಿ ನಿರಾಕರಿಸಿದ್ದರು. ಆದರೆ, ನಮ್ಮ ತಂದೆಯ ಮೃತದೇಹದ ಬದಲು ಬೇರೆ ಮೃತದೇಹ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಆದರೆ, ಕಳೆದ 3 ದಿನಗಳ ಹಿಂದೆ ಸತ್ತಿದ್ದಾನೆ ಎಂದು ಘೋಷಿಸಲಾದ ವ್ಯಕ್ತಿ ಆ್ಯಂಬುಲೆನ್ಸ್ನಲ್ಲಿ ಪಿಪಿಇ ಕಿಟ್ ಒಳಗೆ ಉಸಿರಾಡುತ್ತಿರುವ ವಿಡಿಯೋ ಕುಟುಂಬಸ್ಥರಿಗೂ ತಲುಪಿದೆ. ಇದನ್ನು ಕಂಡ ಕುಟುಂಬಸ್ಥರಿಗೆ ಶಾಕ್ ಆಗಿದೆ. 10 ತಿಂಗಳ ಹಿಂದೆ ನಾವು ಭಾಗಿಯಾಗಿದ್ದು ನಮ್ಮ ತಂದೆಯ ಶವ ಸಂಸ್ಕಾರದಲ್ಲಿ ಅಲ್ಲ, ಬೇರೊಬ್ಬರ ಶವದ ಅಂತ್ಯ ಸಂಸ್ಕಾರದಲ್ಲಿ ಎಂಬುದು ಇವರಿಗೆ ಗೊತ್ತಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೆ, ಈಗ ವ್ಯಕ್ತಿ ಎಲ್ಲಿದ್ದಾರೆ.? ಈ ವಿಡಿಯೋ ಮಾಡಿದವರು ಯಾರು..? ಎಂಬ ರಹಸ್ಯ ಹಾಗೆಯೇ ಉಳಿದಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರಬೀಳಬೇಕಿದೆ.