ನವದೆಹಲಿ: 10 ದಿನಗಳಲ್ಲಿ ಮೌಲ್ಯಮಾಪನ ಯೋಜನೆಗಳನ್ನು ಅಂತಿಮಗೊಳಿಸಿ, ಜುಲೈ 31 ರೊಳಗೆ ಸಿಬಿಎಸ್‌ಇ ಮತ್ತು ಐಸಿಎಸ್ಇ 12ನೇ ತರಗತಿ ಫಲಿತಾಂಶವನ್ನು ಘೋಷಿಸಬೇಕೆಂದು ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
12ನೇ ತರಗತಿಯ ಲಿಖಿತ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಎಸ್ಸಿಇ)ಗೆ 12ನೇ ಕ್ಲಾಸ್ ಫಲಿತಾಂಶ ಪ್ರಕಟಿಸಲು ಗಡುವು ನೀಡಿದೆ.
ಕೋವಿಡ್ನಿಂದಾಗಿ ಲಿಖಿತ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ 12ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾನದಂಡವನ್ನು ಎರಡು ವಾರಗಳ ಅವಧಿಯಲ್ಲಿ ಸಲ್ಲಿಸುವಂತೆ ಈ ಹಿಂದೆ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಗೆ ಕೋರ್ಟ್ ಸೂಚಿಸಿತ್ತು. ಇದರಂತೆ ಎರಡೂ ಮಂಡಳಿಗಳು ಕಳೆದ ವಾರ ತಮ್ಮ ಮೌಲ್ಯಮಾಪನ ಮಾನದಂಡವನ್ನು ಸಲ್ಲಿಸಿದ್ದವು.