ನವದೆಹಲಿ: ಮಳೆ ಮತ್ತು ತೀವ್ರ ಗಾಳಿಯೊಂದಿಗೆ ‘ನಿವಾರ್’ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭಾರಿ ನಷ್ಟ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂತ್ರಸ್ತರಿಗೆ ಪರಿಹಾರನ್ನು ಘೋಷಿಸಿದ್ದಾರೆ.
ಚಂಡಮಾರುತ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವಸ್ತುಸ್ಥಿತಿ ಕುರಿತು ಚರ್ಚಿಸಿದ ನಂತರ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಗಳ ಪರಿಹಾರ ಘೋಷಿಸಿದ್ದಾರೆ.
ಇನ್ನು ಭೀಕರ ಚಂಡಮಾರುತದಿಂದ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ "ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಕೇಂದ್ರ ತಂಡಗಳನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ಮತ್ತು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಗಳನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು" ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಗುರುವಾರ ಭೇಟಿ ನೀಡಿದ್ದರು. ನಿವಾರ್ ಚಂಡಮಾರುತದಿಂದ ಉಂಟಾದ ಒಟ್ಟು ಹಾನಿಯನ್ನು ಅಂದಾಜು ಮಾಡಿದ ನಂತರ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು.