ಬಿಲಾಸಪುರ್ (ಛತ್ತೀಸಗಢ): ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ಶೇ 58ಕ್ಕೆ ಏರಿಸುವ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿರುವ ಛತ್ತೀಸಗಢ ಹೈಕೋರ್ಟ್, ಶೇ 50ರ ಮಿತಿಯನ್ನು ಮೀರಿದ ಮೀಸಲಾತಿ ಅಸಂವಿಧಾನಿಕವಾಗಿದೆ ಎಂದು ಹೇಳಿದೆ.
2012ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೀಸಲಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಪಿ. ಸಾಹು ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ ಎಂದು ಅರ್ಜಿದಾರರೊಬ್ಬರ ಪರ ವಕೀಲ ಮತೀನ್ ಸಿದ್ದಿಕಿ ಹೇಳಿದರು.
2012 ರ ತಿದ್ದುಪಡಿಯ ಪ್ರಕಾರ ಪರಿಶಿಷ್ಟ ಜಾತಿಗಳ ಕೋಟಾವನ್ನು ಶೇಕಡಾ 4 ರಷ್ಟು ಕಡಿತಗೊಳಿಸಿ ಶೇ 12ಕ್ಕೆ ಇಳಿಸಲಾಯಿತು. ಆದರೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 20 ರಿಂದ ಶೇ 32ಕ್ಕೆ ಅಂದರೆ ಶೇ 12 ರಷ್ಟು ಹೆಚ್ಚಿಸಲಾಯಿತು. ಒಬಿಸಿ ಮೀಸಲಾತಿಯನ್ನು ಶೇ 14 ಕ್ಕೆ ಯಥಾಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಅವರು ಹೇಳಿದರು.
ತಿದ್ದುಪಡಿಯ ನಂತರ ರಾಜ್ಯದಲ್ಲಿ ಸಂಚಿತ ಮೀಸಲಾತಿಯು ಶೇಕಡಾ 50 ರಷ್ಟು ಸೀಲಿಂಗ್ ಮಿತಿಯನ್ನು ಉಲ್ಲಂಘಿಸಿ ಶೇಕಡಾ 58 ಕ್ಕೆ ಏರಿಕೆಯಾಯಿತು. ಅದೇ ವರ್ಷ, ಗುರು ಘಾಸಿದಾಸ್ ಸಾಹಿತ್ಯ ಸಮಿತಿ ಮತ್ತು ಇತರ ಅರ್ಜಿದಾರರು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆಯು ಜುಲೈನಲ್ಲಿ ಪೂರ್ಣಗೊಂಡಿದ್ದು ಸೋಮವಾರ ಆದೇಶ ಪ್ರಕಟಿಸಲಾಗಿದೆ ಎಂದು ಸಿದ್ದಿಕಿ ಹೇಳಿದರು.
ಈ ಪ್ರಕರಣದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿನಯ್ ಕುಮಾರ್ ಪಾಂಡೆ, ಮೀಸಲಾತಿ ಪ್ರಮಾಣ ಶೇ 50 ಮೀರಿರುವುದರಿಂದ ಸಂವಿಧಾನದ 16(1)ನೇ ಪರಿಚ್ಛೇದದ ಅಡಿಯಲ್ಲಿ ಸಮಾನತೆಯ ತತ್ವಗಳನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದರು.