ನವದೆಹಲಿ :ರೈತರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಿದೆ. ಇದರ ಬೆನ್ನಲ್ಲೇ ನಾಳೆ ಅಂತಿಮ ಸಭೆ ನಡೆಸಲಿರುವ 40ಕ್ಕೂ ಅಧಿಕ ರೈತ ಸಂಘಟನೆಗಳು, ಪ್ರತಿಭಟನೆ ಅಂತ್ಯಗೊಳಿಸುವ ಕುರಿತು ಫೈನಲ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹರಿಯಾಣದಲ್ಲಿ ಇಂದು ರೈತ ಸಂಘಟನೆಯ ಸಭೆ ನಡೆದಿದೆ. ಈ ವೇಳೆ ಕೇಂದ್ರ ಸರ್ಕಾರದಿಂದ ಅನ್ನದಾತರ ಎಲ್ಲ ಬೇಡಿಕೆ ಅಂಗೀಕಾರಗೊಳಿಸುವುದಾಗಿ ಪ್ರಸ್ತಾಪ ಬಂದಿರುವ ಕಾರಣ, ನಾಳೆ ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಇದೇ ವಿಚಾರವಾಗಿ ಮಾತನಾಡಿರುವ ಭಾರತ್ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಒಪ್ಪುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೋರಾಟ ಅಂತ್ಯಗೊಳಿಸುವಂತೆ ತಿಳಿಸಿದೆ.
ಆದರೆ, ಕೇಂದ್ರದ ಪ್ರಸ್ತಾಪ ಸ್ಪಷ್ಟವಾಗಿಲ್ಲ. ಆಶ್ವಾಸನೆ ಬಗ್ಗೆ ಅನೇಕ ಆತಂಕ ಹೊಂದಿದ್ದೇವೆ. ನಾಳೆ ಮಧ್ಯಾಹ್ನ ಇದೇ ವಿಚಾರವಾಗಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.