ರುದ್ರಪ್ರಯಾಗ್:ಉತ್ತರಾಖಂಡದಲ್ಲಿ ವರುಣಾರ್ಭಟ ಮುಂದುವರಿದಿದ್ದು, ಹಲವೆಡೆ ಭೂ ಕುಸಿತ ಉಂಟಾಗಿದೆ. ಜಿಲ್ಲೆಯ ನಾರ್ಕೋಟ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಪೂರ್ಣ ಅಸ್ತವ್ಯಸ್ತರಾಗಿದ್ದಾರೆ. ಬದ್ರಿನಾಥ್ ದೇಗುಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನಾರ್ಕೋಟ ಗ್ರಾಮದಲ್ಲಿ ಕೇವಲ 10 ಸೆಕೆಂಡ್ಗಳಲ್ಲಿ ಬೆಟ್ಟದ ಒಂದು ಭಾಗ ಕುಸಿದು ಬಿದ್ದಿದ್ದು, ಅವಶೇಷಗಳು ಮನೆಗಳ ಮೇಲೆ ಬಿದ್ದಿವೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ವಿಪತ್ತು ನಿರ್ವಹಣಾ ಇಲಾಖೆ ಸೈನ್ ಟೋಕ್ನಲ್ಲಿ ಐದು ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿದೆ. ಮಳೆ ಬಂದಾಗ ಜನರು ಅಲ್ಲಿ ವಾಸಿಸಲು ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗಿದೆ.