ನವದೆಹಲಿ: ವಿಮಾನದ ಒಳಗೆ ಪ್ರಯಾಣಿಕರು ಕೊರೊನಾ ನಿಯಮಾವಳಿಗಳನ್ನು ಪಾಲಿಸದಿದ್ದರೆ ಅಂತವರನ್ನು ವಿಮಾನ ಹೊರಡುವ ಮುನ್ನವೇ ಕೆಳಗಿಳಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಎಚ್ಚರಿಕೆ ನೀಡಿದ್ದಾರೆ.
ಪದೇ ಪದೆ ಎಚ್ಚರಿಕೆ ನೀಡಿದ ಬಳಿಕವೂ ಪ್ರಯಾಣಿಕರು ವಿಮಾನದೊಳಗೆ ಕೋವಿಡ್ ನಿಯಮ ಉಲ್ಲಂಘಿಸಿದರೆ ಅವರನ್ನು ಡಿ-ಬೋರ್ಡ್ ಮಾಡಲಾಗುವುದು ಎಂದು ಡಿಜಿಸಿಎ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ:ಮ್ಯಾನ್ಮಾರ್‌ನಲ್ಲಿ ಹರಿದ ನೆತ್ತರು: ನಾಲ್ವರು ಪ್ರತಿಭಟನಕಾರರನ್ನು ಗುಂಡಿಕ್ಕಿ ಕೊಂದ ಭದ್ರತಾ ಪಡೆ
ವಿಮಾನದೊಳಗೆ ಮಾತ್ರವಲ್ಲ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಆವರಣದಲ್ಲಿ ಪ್ರಯಾಣಿಕರು ಮಾಸ್ಕ್ ಸರಿಯಾಗಿ ಧರಿಸದೇ ಇದ್ದರೆ, ಧರಿಸಲು ನಿರಾಕರಿಸಿದರೆ, ದೈಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಅವರನ್ನು 'ಅಶಿಸ್ತಿನ ಪ್ರಯಾಣಿಕ' ಎಂದು ಪರಿಗಣಿಸಲಾಗುವುದು.
ಮತ್ತೆ ಮತ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಅಗತ್ಯವಿದ್ದರೆ ಕಾನೂನಿನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.