ಲಖನೌ (ಉತ್ತರ ಪ್ರದೇಶ): ಬಿಸಿಲಿಗೆ ಉತ್ತರ ಪ್ರದೇಶದ ಜನತೆ ತತ್ತರಿಸುವಂತೆ ಆಗಿದೆ. ಬಲ್ಲಿಯಾ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲೇ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಹಗಲಿನ ಹೊತ್ತಿನಲ್ಲಿ ಮನೆಯೊಳಗೆ ಇರಲು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಮಾನಸಿಕ ಆರೋಗ್ಯದ ಮೇಲೂ ಬೀರುತ್ತದೆ ಬಿಸಿಲಿನ ತಾಪಮಾನ; ಕೆಜಿಎಂಯು ತಜ್ಞರ ಅಭಿಮತ
ರಾಜ್ಯ ರಾಜಧಾನಿಯಾದ ಲಖನೌದಿಂದ ಆಗ್ನೇಯಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿ ಈ ಬಲ್ಲಿಯಾ ಜಿಲ್ಲೆ ಇದೆ. ಗುರುವಾರ 23 ಸಾವುಗಳು ವರದಿಯಾಗಿದರೆ, ಶುಕ್ರವಾರದಂದು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಲ್ಲಿಯಾ ಮುಖ್ಯ ವೈದ್ಯಾಧಿಕಾರಿ ಜಯಂತ್ ಕುಮಾರ್ ತಿಳಿಸಿದ್ದಾರೆ. ಎಲ್ಲರ ಮೃತರು ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಇದರ ನಡುವೆ ತೀವ್ರತರವಾದ ಶಾಖದಿಂದಾಗಿ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿತ್ತು. ಹೃದಯಾಘಾತ, ಬ್ರೈನ್ ಸ್ಟ್ರೋಕ್ ಮತ್ತು ಅತಿಸಾರದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ.
ಮತ್ತೊಬ್ಬ ವೈದ್ಯಕೀಯ ಅಧಿಕಾರಿ ದಿವಾಕರ್ ಸಿಂಗ್ ಮಾತನಾಡಿ, ಗಂಭೀರ ಸ್ಥಿತಿಯಲ್ಲಿದ್ದಾಗ 34 ಜನರನ್ನು ಬಲ್ಲಿಯಾ ಮುಖ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದೇ ವೇಳೆ, ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಶುಕ್ರವಾರದಂದು ಬಲ್ಲಿಯಾದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಇನ್ನೊಂದೆಡೆ, ಬಿರು ಬೇಸಿಗೆಯಲ್ಲಿ ರಾಜ್ಯದೆಲ್ಲೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ನೀರು, ಫ್ಯಾನ್, ಹವಾನಿಯಂತ್ರಕಗಳಿಲ್ಲದೆ ಜನರು ಪರದಾಡುವಂತಾಗಿದೆ. ಹೀಗಾಗಿ ಹಲವರು ಪ್ರತಿಭಟನೆಗಳನ್ನು ನಡೆಸಿದ್ದಾರೆ.