ಅಹಮದಾಬಾದ್:ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ಬೆಳಗ್ಗೆ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಮಚ್ಚು ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಎಸ್‌ಡಿಆರ್‌ಎಫ್‌ನೊಂದಿಗೆ ಎನ್‌ಡಿಆರ್‌ಎಫ್ ತಂಡಗಳು ಸಹ ಈ ಕಾರ್ಯದಲ್ಲಿ ನಿರತವಾಗಿವೆ.
ಹೀಗಾಗಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಾಂಘ್ವಿ ತಡರಾತ್ರಿಯಿಂದ ಇಲ್ಲಿಯವರೆಗೂ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ದುಃಖದ ಸಂಗತಿಯೆಂದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನು ಪಡೆಯುವ ಪ್ರಕ್ರಿಯೆ ಮುಂದುವರೆದಿದೆ. ಸಾವಿನ ಸಂಖ್ಯೆ 141ಕ್ಕೂ ಹೆಚ್ಚು ತಲುಪಿದೆ ಎಂದು ಗುಜರಾತ್ ರಾಜ್ಯ ಸರ್ಕಾರ ತಿಳಿಸಿದೆ. ಇಂದು ಮಧ್ಯಾಹ್ನದ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಈ ದುರಂತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ನಿಖರವಾಗಿ ತಿಳಿಯಲಿದೆ. ರಕ್ಷಣಾ ಕಾರ್ಯಕ್ಕಾಗಿ ಕೇಂದ್ರ ಏಜೆನ್ಸಿಗಳ ಜೊತೆಗೆ ಅಗ್ನಿಶಾಮಕ ದಳ, ಕೋಸ್ಟ್ ಗಾರ್ಡ್, ಗರುಡ್ ಕಮಾಂಡೋಸ್ ಮತ್ತು ನೌಕಾಪಡೆಯ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮೋರ್ಬಿ ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಾಗಿದ್ದಾರೆ.
ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ:ಮೂರು ದಿನಗಳ ಗುಜರಾತ್ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೊರ್ಬಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ದುರಂತದ ಕುರಿತು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕ್ರಮಗಳು ರದ್ದು:ಮತ್ತೊಂದೆಡೆ ಬಿಜೆಪಿ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ನವೆಂಬರ್ 1 ರಂದು ಗಾಂಧಿನಗರದಲ್ಲಿ ನಡೆಯಲಿರುವ ಪೇಜ್ ಕಮಿಟಿ ಪ್ರಮುಖರ ದೀಪಾವಳಿ ಮಿಲನ್ ಕಾರ್ಯಕ್ರಮ ರದ್ದಾಗಿದೆ. ಅಕ್ಟೋಬರ್ 31 ರಿಂದ ಪ್ರಾರಂಭವಾಗುವ ರಾಜ್ಯಾದ್ಯಂತ ಪರಿವರ್ತನ ಸಂಕಲ್ಪ ಯಾತ್ರೆಯನ್ನು ಕಾಂಗ್ರೆಸ್ ಮುಂದೂಡಿದೆ. ಆದರೂ ಯಾತ್ರೆಗಾಗಿ ಗುಜರಾತ್ ತಲುಪುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಮೊರ್ಬಿಗೆ ಭೇಟಿ ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನು ಓದಿ:ಭಾರಕ್ಕೆ ಕುಸಿಯಿತೇ ಸೇತುವೆ.. ದುರಂತಕ್ಕೂ ಮೊದಲು ಸೇತುವೆಗೆ ಭೇಟಿ ನೀಡಿದ ಕುಟುಂಬ ಹೇಳಿದ್ದೇನು?
ಹರ್ಷ ಸಾಂಘ್ವಿ ಹೇಳಿದ್ದೇನು?:ಗೃಹ ಸಚಿವ ಹರ್ಷ ಸಾಂಘ್ವಿ ಮೊರ್ಬಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ‘‘ತುಂಬಾ ದುಃಖದ ಘಟನೆ ನಡೆದಿದೆ, ಸೇತುವೆ ಮೇಲೆ ಸುಮಾರು 300 ಮಂದಿ ಇದ್ದರು ಎಂದು ತಿಳಿದು ಬಂದಿದೆ. 6:30 ರಿಂದ 6.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಕಾರ್ಯಾಚರಣೆ ಪ್ರಾರಂಭಿಸಿ ಹಲವಾರು ಜನರನ್ನು ರಕ್ಷಿಸಲಾಯಿತು.