ರೂರ್ಕಿ(ಉತ್ತರಾಖಂಡ):ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕಿದ್ದಕ್ಕಾಗಿ ರಾಜಸ್ಥಾನದಲ್ಲಿ ಹಿಂದು ವ್ಯಕ್ತಿಯ ಶಿರಚ್ಛೇದಿಸಿದ ಆತಂಕಕಾರಿ ಘಟನೆ ನಡುವೆಯೇ ಉತ್ತರಾಖಂಡದ ಬಿಜೆಪಿ ನಾಯಕನಿಗೂ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ಇನ್ನೊಂದೆಡೆ ವೀರ ಸಾವರ್ಕರ್ ಅವರನ್ನು ನಿಂದಿಸಿದ ಆರೋಪದ ಮೇಲೆ ನಟಿ ಸ್ವರ ಭಾಸ್ಕರ್ಗೆ ಜೀವ ಬೆದರಿಕೆ ಹಾಕಿದ ಪತ್ರವನ್ನು ನಟಿಯ ಮನೆಗೆ ಕಳುಹಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.
ಉತ್ತರಾಖಂಡದ ರೂರ್ಕಿಯ ಬಿಜೆಪಿ ಮುಖಂಡ ಗೌರವ್ ತ್ಯಾಗಿ ಎಂಬುವವರು ಕೆಲವು ದಿನಗಳ ಹಿಂದೆ ನೂಪುರ್ ಶರ್ಮಾ ಪರವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಆ ಬಳಿಕ ಕೆಲ ಸಮಾಜಘಾತುಕರಿಂದ ನಿರಂತರ ಕೊಲೆ ಹಾಗೂ ಶಿರಚ್ಛೇದ ಮಾಡುವ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಪಾಕಿಸ್ತಾನ, ಸೌದಿ ಅರೇಬಿಯಾ, ಜಿಂಬಾಬ್ವೆ, ರಾಜಸ್ಥಾನ, ಮಹಾರಾಷ್ಟ್ರಗಳಿಂದ ಕರೆ ಬರುತ್ತಿದೆ. ರಾಜಸ್ಥಾನ ಘಟನೆಯ ಬಳಿಕ ತಾವು ಆತಂಕಕ್ಕೆ ಒಳಗಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಗೌರವ್ ತ್ಯಾಗಿ ದೂರಿನಲ್ಲಿ ಕೋರಿದ್ದಾರೆ.