ಚಂಡೀಗಢ :ಪಂಜಾಬಿ ಗಾಯಕ ಹಾಗೂ ರಾಜಕಾರಣಿ ದಿ.ಸಿಧು ಮೂಸೆವಾಲಾ ಅವರ ಪೋಷಕರಿಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಬೆದರಿಕೆ ಇ-ಮೇಲ್‌ನಲ್ಲಿ, ಮೂಸೆವಾಲಾ ಅವರ ಪೋಷಕರನ್ನು ಏಪ್ರಿಲ್ 25ರೊಳಗೆ ಕೊಲ್ಲುವುದಾಗಿ ಹೇಳಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನಟ ಸಲ್ಮಾನ್ ಖಾನ್ ಅವರ ಹೆಸರನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ.
ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ತಮಗೆ ಬಂದಿರುವ ಕೊಲೆ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜಸ್ಥಾನದ ಜೋಧಪುರದಿಂದ ಈ ಇ-ಮೇಲ್ ಬಂದಿರುವುದು ಗೊತ್ತಾಗಿದೆ. ಈ ಮಾಹಿತಿಯ ಜಾಡು ಹಿಡಿದು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.
ಏಕೆಂದರೆ ಇಂಥದ್ದೊಂದು ಬೆದರಿಕೆ ಇ-ಮೇಲ್ ಕಳುಹಿಸಿರುವುದು 14 ವರ್ಷದ ಬಾಲಕ. ಏಪ್ರಿಲ್ 25 ರೊಳಗೆ ಮೂಸೆವಾಲಾ ಅವರ ಪೋಷಕರನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದ. ಆರೋಪಿ ಜೋಧ್‌ಪುರದ ಕಾಕೆಲವ್ ಫಿಟ್‌ಕಾಸಿಯ ಮಹಿಪಾಲ್‌ನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇ-ಮೇಲ್ ಅನ್ನು ಯಾರ ಕೋರಿಕೆ ಮೇರೆಗೆ ಕಳುಹಿಸಿದ್ದಾನೆ, ಯಾರು ಮಾಡಿಸಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ.
ಮೂಸೆವಾಲ ಹತ್ಯೆಯ ಪ್ರಮುಖಆರೋಪಿ ಮಹಿನ್‌ಪಾಲ್ ಎ.ಜೆ ಬಿಷ್ಣೋಯ್ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಆರೋಪಿ ರಚಿಸಿದ್ದಾನೆ ಎಂದು ಮಾನ್ಸಾ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಲು ಈ ರೀತಿಯ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದೆ.
ಗ್ಯಾಂಗ್ ವಾರ್:ಸಿಧು ಮೂಸೆವಾಲಾ ಹತ್ಯೆ ಸಲುವಾಗಿ ಕಳೆದ ತಿಂಗಳು 26ರಂದು ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಘರ್ಷಣೆ ನಡೆದಿತ್ತು. ಹೊಡೆದಾಟದಲ್ಲಿ ಇಬ್ಬರು ಬರ್ಬರವಾಗಿ ಕೊಲೆಯಾಗಿದ್ದರು. ಮತ್ತಿಬ್ಬರ ಸ್ಥಿತಿ ಗಂಭೀರವಾಗಿತ್ತು.
ಕಳೆದ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗ್ಯಾಂಗ್ಸ್ಟಾರ್ಗಳ ನಡುವೆ ಹರಿತ ಆಯುಧಗಳಿಂದ ದಾಳಿ ನಡೆದಿದೆ ಎಂದು ಹೇಳಲಾಗಿತ್ತು. ಘಟನೆಯಲ್ಲಿ ಮನದೀಪ್ ತೋಪಾನ್ ಜೈಲಿನಲ್ಲೇ ಹತನಾದರೆ, ಮತ್ತೋರ್ವ ಮನಮೋಹನ್ ಸಿಂಗ್ ಗಂಭೀರವಾಗಿ ಗಾಯಗೊಂಡು ತರ್ನ್ ತರಣ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದ. ಇನ್ನೋರ್ವ ಕೇಶವ್ ಎಂಬಾತ ಕೂಡ ಗಂಭೀರ ಸ್ಥಿತಿಯಲ್ಲಿದ್ದು, ಅಮೃತಸರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಧು ಮೂಸೆವಾಲ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈಗಾಗಲೇ ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಸಿಧು ತಮ್ಮ ಕಾರ್‌ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ :ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್ಸ್ಟರ್ಗಳ ಕೊಲೆ