ಇಡುಕ್ಕಿ (ಕೇರಳ): ಆರು ವರ್ಷದ ಬಾಲಕನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನಲೆ ಮರಣ ದಂಡನೆ ಮತ್ತು ಬಾಲಕನ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸೇರಿ ನಾಲ್ಕು ಅಪರಾಧಗಳ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಅನಾಚಲ ಸಮೀಪದ ಅಮಕ್ಕಂಡಂ ಎಂಬಲ್ಲಿ ಈ ಘಟನೆ ನಡೆದಿದೆ. ಇಡುಕ್ಕಿ ತ್ವರಿತ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಮಕ್ಕಳ ತಾಯಿಯ ಸಹೋದರಿಯ ಪತಿ ದೋಷಿ ಎಂದು ಸಾಬೀತಾಗಿದೆ.
ನ್ಯಾಯಾಲಯವು ಅಕ್ಟೋಬರ್ 3, 2021 ರಂದು ಮಾಡಿದ ಅಪರಾಧದ ತೀರ್ಪನ್ನು ಘೋಷಿಸಿತು. ಆರು ವರ್ಷದ ಬಾಲಕನನ್ನು ಕೊಂದಿದ್ದಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಯಿತು. ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಲ್ಲಲು ಯತ್ನಿಸಿದ ನಾಲ್ಕು ಅಪರಾಧಗಳಿಗಾಗಿ ಅಪರಾಧಿಯು ಪ್ರತ್ಯೇಕವಾಗಿ ನಾಲ್ಕು ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಒಟ್ಟಾರೆಯಾಗಿ ವಿವಿಧ ವಿಭಾಗಗಳಲ್ಲಿ ಅಪರಾಧಿಗೆ 92 ವರ್ಷಗಳ ಜೈಲು ಶಿಕ್ಷೆಯಾಗಿದೆ.
ಅಲ್ಲದೇ, ದಂಡ ಪಾವತಿಸದೇ ಇದ್ದಲ್ಲಿ ಇನ್ನೂ 11 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಇಡುಕ್ಕಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ ವರ್ಗೀಸ್ ಆದೇಶಿಸಿದ್ದಾರೆ. ಪ್ರಕರಣದಲ್ಲಿ 73 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥ ಎಂದು ನ್ಯಾಯಾಲಯವು ಇದೇ ತಿಂಗಳ 20 ರಂದು ತೀರ್ಪು ನೀಡಿತು. ಇಡುಕ್ಕಿ ವೆಲ್ಲತುವಲ್ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣದಲ್ಲಿ ಅಪರಾಧಿಗೆ ಒಂದೂವರೆ ವರ್ಷದ ನಂತರ ಶಿಕ್ಷೆಯಾಗಿದೆ.