ಅಲಹಾಬಾದ್ (ಉತ್ತರ ಪ್ರದೇಶ) : ಆಕ್ಸಿಜನ್ ಪೂರೈಕೆಯಾಗದ ಕಾರಣಕ್ಕೆ ಕೋವಿಡ್ ರೋಗಿಗಳು ಮೃತಪಟ್ಟರೆ ಅದು ಅಪರಾಧವಾಗಿದ್ದು, ನರಮೇಧಕ್ಕಿಂತ ಕಡಿಮೆಯೇನಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಮರ್ಪಕ ಆಕ್ಸಿಜನ್ ಪೂರೈಕೆಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಸೂಚಿಸಿದೆ.
ಮೀರತ್ ಮತ್ತು ಲಕ್ನೋ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಈ ಕುರಿತು ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ ಮತ್ತು ತನಿಖೆಗೆ ಆದೇಶಿಸಿದೆ.
ಉತ್ತರ ಪ್ರದೇಶದಲ್ಲಿ ಕೋವಿಡ್ ಹರಡುತ್ತಿರುವುದು ಮತ್ತು ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠ ಆದೇಶ ಹೊರಡಿಸಿದೆ.
ಇದನ್ನೂಓದಿ : ಜೀವನ್ಮರಣದ ವೇಳೆ ಸಿಗದ ಪ್ರಾಣವಾಯು: ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು
"ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸದ ಕಾರಣಕ್ಕಾಗಿ ಕೋವಿಡ್ ರೋಗಿಗಳು ಸಾವಿಗೀಡಾಗುತ್ತಿರುವುದು ಅಪರಾಧ ಕೃತ್ಯವಾಗಿದೆ ಮತ್ತು ಯಾವುದೇ ನರಮೇಧಕ್ಕಿಂತ ಕಡಿಮೆಯಲ್ಲ. ಇದಕ್ಕೆ ಆಕ್ಸಿಜನ್ ಸಂಗ್ರಹಣೆ ಮತ್ತು ಪೂರೈಕೆಯ ಉಸ್ತುವಾರಿ ವಹಿಸಿಕೊಂಡಿರುವವರೇ ಕಾರಣ. ಹೃದಯ ಕಸಿ ಮತ್ತು ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಷ್ಟು ವಿಜ್ಞಾನ ಮುಂದುವರೆದಿರುವಾಗ ನಮ್ಮ ಜನರನ್ನು ಸಾಯಲು ಬಿಡಲು ಹೇಗೆ ಸಾಧ್ಯ?" ಎಂದು ನ್ಯಾಯಾಲಯ ಖಾರವಾಗಿ ಪ್ರಶ್ನಿಸಿತು.