ಗುಣ (ಮಧ್ಯಪ್ರದೇಶ):ಗುಣಾ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ -19ನಿಂದ ಸಾವನ್ನಪ್ಪಿದ 63 ವರ್ಷದ ವ್ಯಕ್ತಿಯ ಕುಟುಂಬ ಸದಸ್ಯರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಮ್ಲಜನಕದ ಪೂರೈಕೆಯನ್ನೇ ಸ್ಥಗಿತಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ, ಆಸ್ಪತ್ರೆಯ ಸಿಬ್ಬಂದಿ ಕೋಪಗೊಂಡ ಕುಟುಂಬದ ಸದಸ್ಯರು ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸದಂತೆ ತಡೆದಿದ್ದಾರೆ.
"ಅವರನ್ನು ತಡೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರೆ. ಆಮ್ಲಜನಕ ಪೂರೈಕೆ ಸ್ಥಗಿತವಾಗಿದ್ದಲ್ಲಿ, ಚಿಕಿತ್ಸೆ ಪಡೆಯುತ್ತಿದ್ದ 22 ರೋಗಿಗಳ ಜೀವಕ್ಕೆ ಅಪಾಯವಾಗುತ್ತಿತ್ತು" ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಕೋವಿಡ್ ಸೋಂಕಿತ ರೋಗಿ ಆರ್ ಡಿ ಶ್ರೀವಾಸ್ತವ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಆಸ್ಪತ್ರೆಯ ಸಿಬ್ಬಂದಿ ಕುಟುಂಬಕ್ಕೆ ಮಾಹಿತಿ ನೀಡಿದಾಗ, ಅವರು ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
"ನಾವು ಸಾಧ್ಯವಾದಷ್ಟು ಉತ್ತಮವಾದ ಚಿಕಿತ್ಸೆ ನೀಡಿದ್ದೇವೆ. ದುರದೃಷ್ಟವಶಾತ್, ರೋಗಿಯು ಬೆಳಗ್ಗೆ 5 ಗಂಟೆ ಸುಮಾರಿಗೆ ನಿಧನರಾದರು. ಅದರ ನಂತರ ಅವರ ಕುಟುಂಬ ಸದಸ್ಯರು ವಿಧ್ವಂಸಕ ಕೃತ್ಯ, ಆಸ್ಪತ್ರೆಯ ಆಸ್ತಿಪಾಸ್ತಿ ನಾಶ ಮತ್ತು ನಮ್ಮ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದರು" ಎಂದು ಡಾ. ಪಂಕಜ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಇದೇ ರೀತಿಯ ಘಟನೆಯಲ್ಲಿ, ದಕ್ಷಿಣ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ವಿಫಲವಾಗಿ ಸಾವನ್ನಪ್ಪಿದ ಕೋವಿಡ್ ಸೋಂಕಿತ ಮಹಿಳೆಯ ಕುಟುಂಬ ಸದಸ್ಯರು ಆರೋಗ್ಯ ಸೌಲಭ್ಯದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು