ಬೆಹ್ರೋರ್ (ರಾಜಸ್ಥಾನ):ಇಂತಹ ಘಟನೆಗಳಿಂದ ನಮ್ಮ ನ್ಯಾಯಾಲಯಗಳು ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಅನುಮಾನ ಮತ್ತು ಬೇಸರ ಉಂಟಾಗುತ್ತದೆ. ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಗೆ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಆರೋಪದ ಮೇಲೆ ಕೋರ್ಟ್ ಈಗ ನೋಟಿಸ್ ನೀಡಿದೆ. ಇದನ್ನು ಕಂಡು ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.
ಈ ಘಟನೆ ಬೆಳಕಿಗೆ ಬಂದಿದ್ದು ರಾಜಸ್ಥಾನದಲ್ಲಿ. ರಾಜ್ಯದಲ್ಲಿ ನವೆಂಬರ್ 25 ರಂದು ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಸೂಕ್ಷ್ಮ ಪ್ರದೇಶಗಳಾದ ಬೆಹ್ರೋರ್, ನೀಮ್ರಾನಾ ಮತ್ತು ಮಂದನ್‌ನಲ್ಲಿ ಕೆಲವರನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆರೋಪದ ಮೇಲೆ ಗುರುತಿಸಲಾಗಿದೆ. ಜೊತೆಗೆ ಮುಂದಿನ 6 ತಿಂಗಳವರೆಗೆ ಈ ಪ್ರದೇಶದಲ್ಲಿ ಆಪಾದಿತ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಅಪರಾಧಿಗಳ ಪಟ್ಟಿಯಲ್ಲಿ ಬೆಹ್ರೋರ್‌ನ ಕಂಕರ್ ಛಾಜಾ ಗ್ರಾಮದ ನಿವಾಸಿ ಕಂದನ್‌ಲಾಲ್ ಯಾದವ್ ಅವರ ಹೆಸರೂ ಇದೆ. ಆದರೆ, ಇವರು ಒಂದೂವರೆ ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ.
ಕೃಷಿಕ ವ್ಯಕ್ತಿಗೆ ನೋಟಿಸ್:ಒಂದೂವರೆ ವರ್ಷಗಳ ಹಿಂದೆ ನಿಧನರಾದ ರಾಜಸ್ಥಾನದ ಬೆಹ್ರೋರ್‌ನ ವ್ಯಕ್ತಿಯೊಬ್ಬರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿ ನೋಟಿಸ್ ನೀಡಲಾಗಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಈ ನೋಟಿಸ್ ಕಳುಹಿಸಲಾಗಿದೆ. ಆದರೆ, ಕೃಷಿಕರಾಗಿದ್ದ ಕಂದನ್‌ಲಾಲ್ ಜೂನ್ 27, 2022 ರಂದು ನಿಧನ ಹೊಂದಿದ್ದಾರೆ. ಅವರ ಕುಟುಂಬವು ಜನವರಿ 11, 2023 ರಂದು ಮರಣ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. ನವೆಂಬರ್ 5ರಂದು ಸಂಜೆ ನ್ಯಾಯಾಲಯದಿಂದ ಮನೆಗೆ ನೋಟಿಸ್ ಬಂದಿದ್ದು, ಅದನ್ನು ಕಂಡ ಕುಟುಂಬಸ್ಥರು ಅಚ್ಚರಿ ಮತ್ತು ಆಘಾತಕ್ಕೊಳಗಾಗಿದ್ದಾರೆ.