ಕರ್ನಾಟಕ

karnataka

ETV Bharat / bharat

ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಸೈನಿಕರ ಮೃತದೇಹ ಪತ್ತೆ - ಅಮರನಾಥ ಯಾತ್ರೆ ಪುನರಾರಂಭ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯೋಧರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

dead-bodies-of-two-soldiers-who-were-washed-away-in-flash-floods-were-found-in-jammu-and-kashmir
ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಸೈನಿಕರ ಮೃತದೇಹ ಪತ್ತೆ

By

Published : Jul 9, 2023, 7:29 PM IST

ಪೂಂಚ್​ (ಜಮ್ಮು ಕಾಶ್ಮೀರ): ಇಲ್ಲಿನ ಪೂಂಚ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಇಬ್ಬರು ಯೋಧರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸೇನಾ ಸಿಬ್ಬಂದಿ ಶನಿವಾರ ಸುರನ್‌ಕೋಟೆ ಪ್ರದೇಶದ ಡೋಗ್ರಾ ನಾಲೆಯನ್ನು ದಾಟುತ್ತಿದ್ದಾಗ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದರು ಎಂದು ಅವರು ಹೇಳಿದ್ದಾರೆ. ನೈಬ್ ಸುಬೇದಾರ್ ಕುಲದೀಪ್ ಸಿಂಗ್ ಅವರ ಮೃತದೇಹವನ್ನು ಶನಿವಾರ ರಾತ್ರಿ ನಾಲೆಯಿಂದ ಹೊರತೆಗೆಯಲಾಗಿದ್ದು, ಭಾನುವಾರ ಲ್ಯಾನ್ಸ್ ನಾಯಕ್ ತೇಲು ರಾಮ್ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.

ಪಂಜಾಬ್ ಮೂಲದ ಮೃತ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸೇನೆ, ಈ ಘಟನೆ ನಡೆದಾಗ ಸೈನಿಕರು ಗಸ್ತು ಕರ್ತವ್ಯದಲ್ಲಿದ್ದರು ಎಂದು ತಿಳಿಸಿದೆ. ಪೂಂಚ್‌ನ ದುರ್ಗಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ತೇಲು ರಾಮ್ ನಾಲೆ ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿ ಕೊಚ್ಚಿಹೋಗಿದ್ದರು. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ್ದ ಕುಲದೀಪ್ ಸಿಂಗ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವೈಟ್ ನೈಟ್ ಕಾರ್ಪ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

16 ಕಾರ್ಪ್ಸ್ ಎಂದೂ ಕರೆಯಲ್ಪಡುವ ವೈಟ್ ನೈಟ್ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಮತ್ತು ಎಲ್ಲಾ ಶ್ರೇಣಿಯ ಯೋಧರು ಧೈರ್ಯಶಾಲಿ ಸೈನಿಕರಿಗೆ ವಂದಿಸುತ್ತಾರೆ ಮತ್ತು ಅವರ ಕುಟುಂಬಗಳ ಜೊತೆ ನಿಲ್ಲುತ್ತಾರೆ ಎಂದು ಸೇನೆ ತಿಳಸಿದರು. ನೈಬ್ ಸುಬೇದಾರ್ ಕುಲದೀಪ್ ಸಿಂಗ್ ತರನ್‌ನ ಚಭಾಲ್ ಕಲಾನ್ ನಿವಾಸಿಯಾಗಿದ್ದು, ಲ್ಯಾನ್ಸ್ ನಾಯಕ್ ತೇಲು ರಾಮ್ ಹೋಶಿಯಾರ್‌ಪುರದ ಖುರಾಲಿ ಗ್ರಾಮದ ನಿವಾಸಿ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಗೌರವ ಸಲ್ಲಿಸಿದ ನಂತರ ಪಂಜಾಬ್‌ನಲ್ಲಿರುವ ಅವರ ಸ್ಥಳಗಳಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ದೇಶದ ಹಲವೆಡೆ ಭಾರಿ ಮಳೆ: ದೆಹಲಿಯಲ್ಲಿ ಒಂದೇ ದಿನ ದಾಖಲೆ ವರ್ಷಧಾರೆ

3 ದಿನದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ:ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಂಜತರ್ನಿ, ಶೇಷನಾಗ್ ಶಿಬಿರಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸತತ ಮೂರನೇ ದಿನವಾದ ಭಾನುವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದರಿಂದ ಅಧಿಕಾರಿಗಳು ಭಾನುವಾರ ಜಮ್ಮು ಬೇಸ್ ಕ್ಯಾಂಪ್‌ನಲ್ಲಿ ಭಕ್ತರ ಗುಂಪನ್ನು ತಡೆದಿದ್ದರು. ಯಾತ್ರೆಯನ್ನು ಸ್ಥಗಿತಗೊಳಿಸಿದ ನಂತರ 6 ಸಾವಿರ ಅಮರನಾಥ ಯಾತ್ರಾರ್ಥಿಗಳು ರಾಂಬನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಗುಹೆಯಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ಣಿಯಲ್ಲಿ ಕರ್ನಾಟಕದ ಕನಿಷ್ಠ 80 ಜನರು ಸಿಲುಕಿಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರ ಶನಿವಾರ ತಿಳಿಸಿತ್ತು.

ABOUT THE AUTHOR

...view details